ಭಾನುವಾರ, ನವೆಂಬರ್ 21, 2010

ಸುದ್ದಿ ಸಮಾದಿ !

ರಾಜಕೀಯ ಸುದ್ದಿಗಳ (!) ರಾಶಿಯಲ್ಲಿ ಎಷ್ಟೋ ಉತ್ತಮ ವರದಿಗಳು ಮಣ್ಣಾಗುತ್ತವೆ ಎಂದು ಕೇಳಿದ್ದೆ. ಇತ್ತೀಚೆಗೆ ನಡೆದ ಘಟನೆಯೊಂದರ ವರದಿ ಪತ್ರಿಕೆಗಳಲ್ಲಿ ಕಂಡು ಕಾಣದಾದಾಗ ಈ ಮಾತು ನಿಜವೆನಿಸಿ ಪೇಚೆನಿಸಿತು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರುಮಾನ್ವಿ ನಿಮಗೆ ನೆನಪಿರಬಹುದು. 2007, ಎಪ್ರಿಲ್ 24 ರಂದು ಸಂದೀಪ ಎಂಬ ಪುಟ್ಟ ಬಾಲಕ ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ. ಇದು ದೊಡ್ಡ ಸುದ್ದಿಯಾಯಿತು. ರಾಷ್ಟ್ರ ಮಟ್ಟದ ಪತ್ರಿಕೆಗಳು, ಟಿವಿ ವಾಹಿನಿಗಳು ವರದಿ ಮಾಡಿದ್ದವು. ಇದೇ ಗ್ರಾಮದಲ್ಲಿ ಶನಿವಾರ (20 ನವೆಂಬರ್ 2010) ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ.
ಮಾನಸಿಕ ಅಸ್ವಸ್ಥ ಎಂದು ಹೇಳಲಾದ ಶಿಕ್ಷಕನೊಬ್ಬ ಮೂವರು ಶಾಲಾ ಮಕ್ಕಳನ್ನು ಬಾವಿಗೆ ಎಸೆದು ಒಬ್ಬಳು ಬಾಲಕಿಯ ಸಾವಿಗೆ ಕಾರಣನಾಗಿದ್ದಾನೆ. ಇತರೆ ಇಬ್ಬರು ಬಾಲಕರು ಪಾರಾಗಿದ್ದಾರೆ. 1ನೆ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಬಾಲಕಿ ಗಗನ್ ಮೃತ ವಿಧ್ಯಾರ್ಥಿನಿ. ಘಟನೆಯ ಚಿತ್ರಣಗಳು ತೀವ್ರ ಮನ ಮಿಡಿಯುವಂತಿದ್ದವು. ಈ ಕುರಿತು ಕೆಲವೇ ಪತ್ರಿಕೆಗಳು ಉತ್ತಮ ವರದಿ ಪ್ರಕಟಿಸಿದರೆ ಇನ್ನುಳಿದ ಪತ್ರಿಕೆಗಳು ಸಾಧಾರಣ ಸುದ್ದಿಯ ಸ್ಥಾನ ನೀಡಿ ಕೈ ತೊಳೆದುಕೊಂಡಿವೆ.
ಹೀಗೇಕೆ?
ರಾಜಕೀಯ ಸುದ್ದಿಗಳೇ ಈಗ ಟಿವಿ ಪರದೆ ಹಾಗೂ ಪತ್ರಿಕೆಗಳ ಪುಟಗಳನ್ನು ತುಂಬಿಕೊಂಡಿವೆ. ಸರಕಾರದಲ್ಲಿ ಬಿನ್ನಮತ, ಸಿಎಂ ಸ್ಥಾನ ಅತಂತ್ರ ಇಂತಹ ರಾಜಕೀಯ ಸುದ್ದಿಗಳಿಂದ ಮಾನವೀಯ ವರದಿಗಳು, ಸುದ್ದಿಗಳಿಗೆ ಮಹತ್ವ ಬರುತ್ತಿಲ್ಲ. ಹೀಗಾಗಿ ಸಣ್ಣ ಪುಟ್ಟ ಸುದ್ದಿಗಳು ಸಂದಿ-ಗೊಂದಿಗೆ ತುರುಕಲ್ಪಡುತ್ತಿವೆ. ಒಂದೆರಡು ಸಾವಿಗೆ ಬೆಲೆ ಇಲ್ಲದಂತಾಗಿದೆ.
ಏಕೆ? ಪುಟ್ಟ ಬಾಲಕಿಯ ಸಾವು ಸುದ್ದಿಯಲ್ಲವೇ. ಏನು ಅರಿಯದ ಗಗನ್ ಶಿಕ್ಷಕನ ಹುಚ್ಚಾಟಕ್ಕೆ ಬಲಿಯಾಗಿದ್ದಾಳೆ. ಆಕೆಯ ಕುಟುಂಬ ಕಣ್ಣಿರು ಹರಿಸುತ್ತಿದ್ದು, ಇಡೀ ಹಳ್ಳಿಯಲ್ಲಿ ಸ್ಮಶಾನ ಮೌನ ಆವರಿಸಿದೆ. ಈ ಸುದ್ದಿಗೂ ಮಹತ್ವ ನೀಡಬೇಕಿತ್ತಲ್ಲವೇ? ಇಂತಹ ಎಷ್ಟೋ ಸುದ್ದಿಗಳು ದಿನವು ಹೀಗೆ ಮಣ್ಣಾಗುತ್ತವೆ.