ಭಾನುವಾರ, ನವೆಂಬರ್ 21, 2010

ಸುದ್ದಿ ಸಮಾದಿ !

ರಾಜಕೀಯ ಸುದ್ದಿಗಳ (!) ರಾಶಿಯಲ್ಲಿ ಎಷ್ಟೋ ಉತ್ತಮ ವರದಿಗಳು ಮಣ್ಣಾಗುತ್ತವೆ ಎಂದು ಕೇಳಿದ್ದೆ. ಇತ್ತೀಚೆಗೆ ನಡೆದ ಘಟನೆಯೊಂದರ ವರದಿ ಪತ್ರಿಕೆಗಳಲ್ಲಿ ಕಂಡು ಕಾಣದಾದಾಗ ಈ ಮಾತು ನಿಜವೆನಿಸಿ ಪೇಚೆನಿಸಿತು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರುಮಾನ್ವಿ ನಿಮಗೆ ನೆನಪಿರಬಹುದು. 2007, ಎಪ್ರಿಲ್ 24 ರಂದು ಸಂದೀಪ ಎಂಬ ಪುಟ್ಟ ಬಾಲಕ ಕೊಳವೆ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ. ಇದು ದೊಡ್ಡ ಸುದ್ದಿಯಾಯಿತು. ರಾಷ್ಟ್ರ ಮಟ್ಟದ ಪತ್ರಿಕೆಗಳು, ಟಿವಿ ವಾಹಿನಿಗಳು ವರದಿ ಮಾಡಿದ್ದವು. ಇದೇ ಗ್ರಾಮದಲ್ಲಿ ಶನಿವಾರ (20 ನವೆಂಬರ್ 2010) ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ.
ಮಾನಸಿಕ ಅಸ್ವಸ್ಥ ಎಂದು ಹೇಳಲಾದ ಶಿಕ್ಷಕನೊಬ್ಬ ಮೂವರು ಶಾಲಾ ಮಕ್ಕಳನ್ನು ಬಾವಿಗೆ ಎಸೆದು ಒಬ್ಬಳು ಬಾಲಕಿಯ ಸಾವಿಗೆ ಕಾರಣನಾಗಿದ್ದಾನೆ. ಇತರೆ ಇಬ್ಬರು ಬಾಲಕರು ಪಾರಾಗಿದ್ದಾರೆ. 1ನೆ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಬಾಲಕಿ ಗಗನ್ ಮೃತ ವಿಧ್ಯಾರ್ಥಿನಿ. ಘಟನೆಯ ಚಿತ್ರಣಗಳು ತೀವ್ರ ಮನ ಮಿಡಿಯುವಂತಿದ್ದವು. ಈ ಕುರಿತು ಕೆಲವೇ ಪತ್ರಿಕೆಗಳು ಉತ್ತಮ ವರದಿ ಪ್ರಕಟಿಸಿದರೆ ಇನ್ನುಳಿದ ಪತ್ರಿಕೆಗಳು ಸಾಧಾರಣ ಸುದ್ದಿಯ ಸ್ಥಾನ ನೀಡಿ ಕೈ ತೊಳೆದುಕೊಂಡಿವೆ.
ಹೀಗೇಕೆ?
ರಾಜಕೀಯ ಸುದ್ದಿಗಳೇ ಈಗ ಟಿವಿ ಪರದೆ ಹಾಗೂ ಪತ್ರಿಕೆಗಳ ಪುಟಗಳನ್ನು ತುಂಬಿಕೊಂಡಿವೆ. ಸರಕಾರದಲ್ಲಿ ಬಿನ್ನಮತ, ಸಿಎಂ ಸ್ಥಾನ ಅತಂತ್ರ ಇಂತಹ ರಾಜಕೀಯ ಸುದ್ದಿಗಳಿಂದ ಮಾನವೀಯ ವರದಿಗಳು, ಸುದ್ದಿಗಳಿಗೆ ಮಹತ್ವ ಬರುತ್ತಿಲ್ಲ. ಹೀಗಾಗಿ ಸಣ್ಣ ಪುಟ್ಟ ಸುದ್ದಿಗಳು ಸಂದಿ-ಗೊಂದಿಗೆ ತುರುಕಲ್ಪಡುತ್ತಿವೆ. ಒಂದೆರಡು ಸಾವಿಗೆ ಬೆಲೆ ಇಲ್ಲದಂತಾಗಿದೆ.
ಏಕೆ? ಪುಟ್ಟ ಬಾಲಕಿಯ ಸಾವು ಸುದ್ದಿಯಲ್ಲವೇ. ಏನು ಅರಿಯದ ಗಗನ್ ಶಿಕ್ಷಕನ ಹುಚ್ಚಾಟಕ್ಕೆ ಬಲಿಯಾಗಿದ್ದಾಳೆ. ಆಕೆಯ ಕುಟುಂಬ ಕಣ್ಣಿರು ಹರಿಸುತ್ತಿದ್ದು, ಇಡೀ ಹಳ್ಳಿಯಲ್ಲಿ ಸ್ಮಶಾನ ಮೌನ ಆವರಿಸಿದೆ. ಈ ಸುದ್ದಿಗೂ ಮಹತ್ವ ನೀಡಬೇಕಿತ್ತಲ್ಲವೇ? ಇಂತಹ ಎಷ್ಟೋ ಸುದ್ದಿಗಳು ದಿನವು ಹೀಗೆ ಮಣ್ಣಾಗುತ್ತವೆ.

ಬುಧವಾರ, ನವೆಂಬರ್ 17, 2010

ಚಾರ್ಲಿನ್ ಚಾಪ್ಲಿನ್ ಆಣಿಮುತ್ತು


* ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನಮ್ಮಸಮಸ್ಯೆಗಳು ಕೂಡ.
* ನಾವು ನಗು ಕಾಣದ ದಿನವೇ ನಮ್ಮ ಜೀವನದ ಅತಿ ದುಃಖದ ದಿನ.
* ನಾನು ಮಳೆಯಲ್ಲಿ ನಡೆಯಲು ಇಷ್ಟಪಡುತ್ತೇನೆ, ಏಕೆಂದರೆ ನನ್ನ ಕಣ್ಣಿರು ಯಾರಿಗೂ ಕಾಣುವುದಿಲ್ಲ.

ಮಂಗಳವಾರ, ನವೆಂಬರ್ 16, 2010

ಜೀವನದ ರಹಸ್ಯ !

ಜೀವನದ ಕೊನೆಯ ದಿನಗಳು ಅವು.
98 ವಯಸ್ಸಿನ ಅಜ್ಜಿ ಸಾವಿನ ಬಾಗಿಲು ತಟ್ಟುತ್ತಿದ್ದಳು. ಆಕೆಯ ಕೊನೆಯ ದಿನಗಳು ಸುಂದರವಾಗಿರಲಿ ಎಂಬುದೇ ಅವರ ಮನೆಯವರ ಆಶಯ. ಕುಟುಂಬ ಸದಸ್ಯರೆಲ್ಲ ಆಕೆಯ ಆರೈಕೆಯಲ್ಲಿ ತೊಡಗಿದ್ದರು. ಆದರೆ, ಹಾಲು, ಹಣ್ಣು, ಸಿಹಿ ಪದಾರ್ಥ ಏನು ನೀಡಿದರೂ ಅಜ್ಜಿಗೆ ಇಷ್ಟವಿರಲಿಲ್ಲ.
ಅಜ್ಜಿಯ ಹವ್ಯಾಸ ಅರಿತಿದ್ದ ಯುವತಿಯೊಬ್ಬಳು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ಬಿಸಿ ಹಾಲಿನೊಂದಿಗೆ ಸೇರಿಸಿ ಅಜ್ಜಿಗೆ ನೀಡಿದಳು. ಮೊದ ಮೊದಲು ಬೇಡ ಅಂದ ಅಜ್ಜಿ, ತುಸು ಕುಡಿದು ಕೊನೆಗೆ ಪೂರ್ತಿ ಸೇವಿಸಿದಳು.
ಜೀವನದ ಕೊನೆಯ ದಿನಗಳು ಸುಂದರವಾದವು ಎಂಬುದು ಅಜ್ಜಿಯ ಕಂಗಳಲ್ಲಿ ಸ್ಪಷ್ಟವಾಗಿತ್ತು. ಕೊನೆಗೆ "ಜೀವನದ ರಹಸ್ಯವೊಂದನ್ನು ನನಗೆ ಹೇಳು" ಎಂದು ಯುವತಿ ಕೋರಿದಾಗ ಅಜ್ಜಿ ಹೇಳಿದಳು.
"ನಾನು ಕುಡಿದ ಹಾಲನ್ನು ಕೊಟ್ಟ ಹಸುವನ್ನು ಯಾರಿಗೂ ಮಾರಬೇಡ !"