ಶನಿವಾರ, ಸೆಪ್ಟೆಂಬರ್ 18, 2010

ಬೂದಿಯಾದ ನೆನಪು...

ವತ್ತು ಆಫೀಸ್ ಗೆ ರಜಾ.
ಸುಮ್ನೆ ಒಬ್ಬನೇ ಬೇಜಾರಾಗಿತ್ತು. ಒಂಟಿ (!) ಜೀವನ ಬಲು ಬೇಸರ. ಹೊರಗೆ ಮಳೆ, ಸುತ್ತೋಕೆ ಆಗದೆ, ಮನೆಯಲ್ಲೂ ಕುಡೋಕೆ ಆಗದೆ ಚಡಪಡಿಕೆ. ಬೆಳಗ್ಗೆ ಮಾಡಿದ್ದ ಟೀ ಮತ್ತೆ ಮತ್ತೆ ಬಿಸಿ ಮಾಡಿ ಹೊಟ್ಟೆಗೆ ಇಳಿಸುತ್ತಾ, ಬಿಸಿ ಹೊಗೆ ಉಗುಳುತ್ತಾ ಮನೆಯೆಲ್ಲ ಮಂಜು ದಟ್ಟಿಸಿತ್ತು. ಟಿವಿ ರಿಮೋಟ್ ಒತ್ತಿ ಒಂದರ ನಂತರ ಮತ್ತೊಂದು ಚಾನೆಲ್ ಬದಲಿಸಿದರೂ 'ಛೆ ಒಳ್ಳೆ ಪ್ರೋಗ್ರಾಮ್ ಇಲ್ವಲ್ಲ' ಎಂದು ನಿಟ್ಟುಸಿರು ಬಿಟ್ಟಿದ್ದೆ ಸಾಕಾಯ್ತು.

ಬೆಳಗ್ಗೆಯಿಂದ ತೆಪ್ಪಗೆ ಬಿದ್ದಿದ್ದ ಮೊಬೈಲ್ ಇದ್ದಕ್ಕಿದ್ದಂಗೆ ಕಿರುಚಿ ಕೊಂಡಾಗ ಎತ್ತಿ ಕಿವಿ ಕೊಟ್ಟೆ.
'ನೀನು ಬ್ಲಾಗ್ ನಲ್ಲಿ ಹಾಕಿದ ಲೆಟರ್ ಡಿಲೀಟ್ ಮಾಡು. ನಂಗೆ ಇಷ್ಟ ಆಗ್ಲಿಲ್ಲ. ಅಷ್ಟೇ...'
ಫೋನ್ ಮಾಡಿದಾಕೆ ತುಸು ಖಾರವಾಗಿ ಹೇಳಿದ್ದು. ಏನು ಹೇಳಬೇಕೋ ಗೊತ್ತಾಗ್ಲಿಲ್ಲ. ಸರಿ ಆಯಿತು ಅಂದೆ. ಆ ಕಡೆ ಫೋನ್ ಕುಕ್ಕಿದ ಶಬ್ದ ಸ್ಪಷ್ಟವಾಗಿ ಕೇಳಿಸಿತು.
ಒಂದು ಪತ್ರ ಇಷ್ಟೊಂದು ಪ್ರಭಾವ ಬಿರಿತ್ತಾ. ಅಷ್ಟೊಂದು ಕಿರಿ ಕಿರಿ ನೀಡಿತ್ತೇನೋ.. ಹೋಗಲಿ ಬಿಡು ಡಿಲೀಟ್ ಮಾಡಿದರಾಯ್ತು ಎಂದು ಮತ್ತೆ ಹೊಗೆ ತುಂಬಿಸಲು ಅಣಿಯಾದೆ. ಎನೇನೋ ನೆನಪಾಯ್ತು.

'ಛೀ... ಇದೇನು ಕೆಟ್ಟ ಚಟ. ನಂಗೆ ಸ್ವಲ್ಪನೂ ಇಷ್ಟಾ ಆಗೋಲ್ಲ. ಬಿಟ್ಟು ಬಿಡು ಅಂತ ಎಷ್ಟು ಸಲ ಹೇಳೋದು. ನೀ ಹೀಗೆ ಮಾಡ್ತಿದ್ದಾರೆ ಮುಂದೆ ಸರಿ ಆಗೋಲ್ಲ. ತಿಳಿತಾ...'
ಹುಂ ಗುಟ್ಟಿದ್ದೆ.
ಹುಂ ಅಲ್ಲ ಆನೆ ಮಾಡು ಅಂದಾಗ, ಅದಕ್ಕೂ ಹುಂ ಅಂದೆ. ನಾನು ಸುಳ್ಳು ಹೇಳ್ತಿದ್ದೇನೆ ಅನ್ನೋದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಆದರೂ ಅಧಿಕಾರ ಚಲಾಯಿಸಿ ನನಗೆ ಒಳ್ಳೆಯ ಮಾತು ಹೇಳಿದ್ದಳು.

ಒಂದು ಸಾರಿ ಆಫೀಸ್ ಹತ್ತಿರದ ಹೋಟೆಲನಲ್ಲಿ ಹೊಗೆ ಬಿಡುತ್ತ ಕುಳಿತಿದ್ದನ್ನ ನೋಡಿ ಗಲ್ಲ ಉಬ್ಬಿಸಿದ್ದಳು. 2 ದಿನ ಮಾತು ಬಂದ್. ಸಾಮಾನ್ಯವಾಗಿ ಹುಸಿ ಕೋಪ ಮಾಡಿಕೊಳ್ಳುತ್ತಿದ್ದ ಅವಳು ಆಗ ಸ್ವಲ್ಪ ಸೀರಿಯಸ್ ಆಗಿದ್ದು ನಂಗೆ ಭಯ ಮೂಡಿಸಿತ್ತು. ಹೇಗೋ ದಮ್ಮಯ್ಯ ಅಂದು ಅವಳನ್ನು ಪುಸಲಾಯಿಸಿ, ಹೊರಗೆ ಬಂದು ಮತ್ತೆ ದಂ ಎಳೆದಿದ್ದೆ. ಪಾಪ ಅವಳಿಗೆ ಮೋಸ ಮಾಡಿದೆನೋ ಅಂತ ಅನಿಸಿದ್ದಿಲ್ಲ.

ಮತ್ತೆ ಅವಳ ಮುಂದೆ ಬಂದಾಗ ನನ್ನ ಸು'ವಾಸನೆ' ಬರಬಾರದೆಂದು ಸುವಾಸನೆಯ ಸೋಪು, ಘಮ್ಮೆನ್ನುವ ಸೆಂಟು ಹಾಕಿದ್ದು ಉಂಟು. ಹಾಗೆ ಸುವಾಸನೆ ಹಿರಿ ಹೂವಿನಂತೆ ಅರಳುತ್ತಿದ್ದ ಅವಳು, 'ಸೆಂಟು ಒಳ್ಳೇದಿದೆ ಕಣೋ' ಅಂತು ಕಣ್ಣು ಮಿಟಿಕಿಸುತ್ತಿದ್ದಳು.
ಹೋಗುವಾಗ ತಿರುಗಿ ನೋಡಿ 'ಕೋತಿ' ಅಂತ ಬೈಯೋದನ್ನು ಮಾತ್ರ ಮರೆಯುತ್ತಿರಲಿಲ್ಲ. ಮುಂಗುರುಳು ಸವರಿ ತಿರುಗಿ ತಿರುಗಿ ನೋಡಿ ಹೋಗುತ್ತಿದ್ದ ಅವಳ ಮುಖದ ಮುದ್ದು ನಗು ಕಣ್ಮುಂದೆ ಉಳಿಯುತ್ತಿತ್ತು.

ಕೈ ಬೆರಳು ಸುಟ್ಟ ಅನುಭವವಾಗಿ ಎಚ್ಚರಗೊಂಡೆ. ಅವಳ ನೆನಪಲ್ಲಿ ಬೂದಿಯಾಗಿದ್ದೆ. ಈಗಲೂ ಅವಳು ಜತೆ ಇದ್ದಿದ್ದರೆ ಈ ಚಟ ಬಿಡುತ್ತಿದ್ದೆನೇನೋ....

ಕೈಲ್ಲಿದ್ದನ್ನು ಬಿಸಾಕಿ ಮನೆ ಹೊರಗೆ ಮಳೆಗೆ ಮುಖ ಒಡ್ಡಿದಾಗ ಹನಿಯಾಗಿ ಎಲ್ಲ ಕರಗಿ ಹೋದಂತಾಯಿತು.