"ನಿಮ್ಮ ಮನೆಯಲ್ಲಿ ಜಿರಳೆ ಬಂದರೆ ಅದಕ್ಕೆ ಆಹಾರ ಕೊಟ್ಟು ಸಾಕುತ್ತೀರಾ? ಅಥವಾ ಸಾಯಿಸ್ತೀರಾ?"...
ಪೊಲೀಸ್ ಕಮಿಷನರ್ ಉತ್ತರಿಸುವ ಮೊದಲೇ, ಜಿರಳೆಗಳು ಸಾಯಲೇಬೇಕು ಎಂದು ಆತ ಘರ್ಜಿಸುತ್ತಾನೆ. ಏಕೆಂದರೆ ಆತ A Stupid Common Man.
ಮೊನ್ನೆ 'A WEDNESDAY' ಹಿಂದಿ ಚಿತ್ರ ನೋಡಿದೆ. ನೋಡಲೇಬೇಕಾದ ಚಿತ್ರ. ಜನಸಾಮಾನ್ಯನ ಅಂತಃಶಕ್ತಿಯನ್ನು ಬಡಿದೆಬ್ಬಿಸುವ ಚಿತ್ರ. ನಮಗೆ ಯಾವುದೇ ಶಕ್ತಿ, ಅಧಿಕಾರವಿಲ್ಲ ಎಂದು ಕೈಚೆಲ್ಲಿ ಕೂರುವ ಸಾಮಾನ್ಯನಿಗೆ ಆತನ ದಿವ್ಯ ಸಾಮರ್ಥ್ಯವನ್ನು ಸ್ಮರಿಸುತ್ತದೆ.
ಒಂದೇ ಸಾಲಿನಲ್ಲಿ ಹೇಳಬೇಕೆಂದರೆ, ರೈಲುಗಳಲ್ಲಿ ಬಾಂಬ್ ಇಟ್ಟು ನೂರಾರು ಅಮಾಯಕರನ್ನು ಬಲಿತೆಗೆದುಕೊಳ್ಳುವ ದುಷ್ಟ ಶಕ್ತಿಯನ್ನು ಸರ್ವನಾಶ ಮಾಡುವ ಓರ್ವ ಸಾಮಾನ್ಯ ಮನುಷ್ಯನ ಏಕಾಂಗಿ ಹೋರಾಟವೇ 'A WEDNESDAY'. ನಮ್ಮ ಕುಟುಂಬ (ದೇಶ) ಗಲೀಜಾಗಿದೆ. ನಾವೇ, ಪೊರಕೆ ಹಿಡಿದು ಸ್ವಚ್ಛಗೊಳಿಸಬೇಕು ಎಂಬುದೊಂದೇ ಸಾರ.
ಯಾವುದೇ ತಂತ್ರಜ್ಞ, ವಿದ್ವಾಂಸ, ಮುತ್ಸದ್ಧಿ ಕೂಡ ಸಾಮಾನ್ಯ ವ್ಯಕ್ತಿಯೇ. ಜನರಿಂದ ಗುರುತಿಸಲ್ಪಟ್ಟು ಗಣ್ಯರ ಸಾಲಿನಲ್ಲಿ ಕುಳಿತಿರುತ್ತಾನೆ. ಅದೇ ರೀತಿ, ಓರ್ವ ವಿದ್ವಾಂಸ ಇಂದು ಜನಸಾಮಾನ್ಯನಾಗಿರಬಹುದು. ಆತನಲ್ಲೂ ಬುದ್ಧಿ, ಶಕ್ತಿ ಎಲ್ಲವೂ ಇದೆ. ಗಣ್ಯರೆನಿಸಿಕೊಂಡವರಿಗಿಂತಲೂ ಹೆಚ್ಚಿಗಿದೆ. ಎಲ್ಲವೂ ಒಟ್ಟುಗೂಡಿದರೇ ಕ್ರಾಂತಿಗೆ ನಾಂದಿ.
ಈ ಚಿತ್ರದಲ್ಲಿ ಸಾಮಾನ್ಯನೋರ್ವ ತನ್ನ ಬುದ್ಧಿ ಚತುರತೆಯಿಂದ ನೂರಾರು ಜನರನ್ನು ಬಲಿತೆಗೆದುಕೊಂಡ ಉಗ್ರರನ್ನು ಯಮಪುರಿಗೆ ಅಟ್ಟುತ್ತಾನೆ. ಅಮಾಯಕನ ಸಾವಿನ ಆಕ್ರಂಧನ ನೋಡಿ ಕೇಕೆ ಹಾಕುವ ದುಷ್ಟರಿಗೆ ಮರಣದಂಡನೆ ಶಿಕ್ಷೆ ನೀಡುತ್ತಾನೆ. ಯಾವುದೇ ಹಾಡು, ಕುಣಿತ, ತಮಾಷೆಗಳಿಲ್ಲದ ಚಿತ್ರ ಕೇವಲ ಒಂದುವರೆ ಗಂಟೆಯಲ್ಲಿ ಸಮಾಜದ ಎಲ್ಲ ಮುಖಗಳನ್ನು ತೋರಿಸುತ್ತದೆ.
ನಾವು A Stupid Common Man ಆದ್ರೆ: ಕೆಲವೊಮ್ಮೆ ಆಗಲೇಬೇಕು ಅನಿಸುತ್ತೆ. ಇಂದಿನ ಭ್ರಷ್ಟ ರಾಜಕೀಯ, ದುಷ್ಟ ಆಡಳಿತ, ಲಂಚಗುಳಿತನ, ಮೋಸದ ರಂಗೋಲಿ ಕೆಳಗೇ ತೂರುವ ಖದೀಮರು, ಅನಿಷ್ಟ ಪದ್ಥತಿ. ಛೇ, ಇನ್ನೂ ಎಷ್ಟು ದಿನ ಸಹಿಸ್ಕೋಬೇಕು. ಅಡ್ಜಸ್ಟ್ ಮಾಡ್ಕೊಂಡು ಸಾಕಾಗಿದೆ.
ವ್ಯವಸ್ಥೆ ಹದಗೆಟ್ಟು ಗಬ್ಬುನಾರುತ್ತಿದೆ ಎನ್ನುವುದಕ್ಕೆ ದೊಡ್ಡ ಉದಾಹರಣೆ ಬೇಕಿಲ್ಲ. ಚಿಲ್ಲರೆ ಹಣಕ್ಕಾಗಿ ವಂಚಿಸುವ ಕೆಲ ಬಸ್ ಕಂಡಕ್ಟರ್, ಪೊಲೀಸ್, ಸರಕಾರಿ ಕಚೇರಿಗಳಲ್ಲಿನ ಲಂಚುಗಳಿತನ, ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇನ್ನೂ ಕೋಟಿಗಟ್ಟಲೇ ನುಂಗುವ ತಿಮಿಂಗಲುಗಳ ಲೆಕ್ಕ ಹಾಕಲು ಸಾಧ್ಯವೆ.
ಆದರೆ ಸಾಮಾನ್ಯನ ಸಹನೆಗೂ ಮಿತಿಯಿದೆ. ಸಹನೆ ಮೀರಿದರೇ ಆತನನ್ನು ತಡೆಯುವವರಿಲ್ಲ. ಕ್ರಾಂತಿಯಾದೀತು ಎಚ್ಚರಿಕೆ. ಏಕೆಂದರೆ, ಮನೆಗೆ ಜಿರಳೆ ಬಂದರೆ ಸಾಯಿಸಬೇಕೇ ಹೊರತು ಸಾಕುವುದಿಲ್ಲ.