ಸೋಮವಾರ, ಸೆಪ್ಟೆಂಬರ್ 29, 2008

ಕನಸು ಕದ್ದ ಹುಡುಗಿ

Hi ಕೋತಿ,
ಏನು ಕೋತಿ ಅಂದದ್ದಕ್ಕೆ ಬೇಜರಾಯಿತಾ. ಆದ್ರೂ ನೀನು ಕೋತಿನೇ ಕಣೋ. ನೀ ಮಾಡುವ ಚೇಷ್ಟೆ, ನಿನ್ನ ತುಂಟಾಟ ಯಾವ ಕೋತಿಗೂ ಕಡಿಮೆಯಿಲ್ಲ. ಅದಕ್ಕೆ ಕೋತಿ ಅಂದೆ. ಹೌದು ತಾನೆ. ಆದರೂ ನೀನಂದ್ರೆ ನಂಗೀಷ್ಟ ಕಣೋ.

ಸುಮ್ಮನೆ ಸುಮ್ಮನೆ
ಇದ್ದರೂ ಸುಮ್ಮನೆ
ಪ್ರಾಣ ತಿಂತಾನೇ
ನನ್ನ ಪ್ರೀತಿ ಗೆಲ್ತಾನೆ...


ಯಾಕೋ ಹೀಗೆ ಸತಾಯಿಸ್ತಿಯಾ. ನಿದ್ದೆ ಮಾಡಕ್ಕೂ ಬಿಡಲ್ಲ, ಊಟ ಮಾಡಕ್ಕೂ ಆಗಲ್ಲ, ನಿಜಕ್ಕೂ ಕೂರಕ್ಕೂ ಆಗಲ್ಲ. ಏನೋ ಮೋಡಿ ಮಾಡಿದೆ ನೀನು. ನನ್ನ ಪ್ರತಿಯೊಂದು ಕೆಲಸದಲ್ಲೂ ನಿನ್ನ ಕಾಣ್ತೀನಿ. ನೀನು ನನ್ನ ಕಣ್ಣ ಮುಂದೆ ನಗ್ತಾ ನಿಂತಿರ್ತಿಯ, ಕಣ್ಣು ಹೊಡಿತೀಯ, ಕಣ್ಣಲ್ಲೇ ಮುದ್ದಾಡ್ತಿಯಾ.

ನಿನ್ನ ನೆನಪು ಇಲ್ಲದ ದಿನಗಳೇ ಇಲ್ಲ ಕಣೋ. ನನ್ನ ಉಸಿರು ಯಾವತ್ತು ನಿಲ್ಲುತ್ತೋ ಅವತ್ತೇ ನಿನ್ನ ನೆನಪನ್ನು ನನ್ನ ಜೊತೆಯಲ್ಲಿ ನಿಲ್ಲಿಸ್ತೀನಿ. ನೀನಿಲ್ಲ ಅಂದ್ರೆ ನಾನಿಲ್ಲ ಕಣೋ.

ಯಾಕೊ ಬಂದೆ. ನಾನು ಹಾಯಾಗಿದ್ದೆ. ಸ್ವಚ್ಛಂದ ಬಾನಿನಲ್ಲಿ ಸ್ವತಂತ್ರವಾಗಿ ಹಾರಾಡೋ ಪುಟ್ಟ ಹಕ್ಕಿ ತರ. ನೀ ಪ್ರೀತಿಯ ಬಂಧನದಲ್ಲಿ ನನ್ನ ಬಂಧಿಸಿಬಿಟ್ಟೆ. ಆದ್ರೆ ಆ ಬಂಧನ ಇಷ್ಟೊಂದು ಸಂತೋಷ ಕೊಡುತ್ತೆ ಅಂತಾ ಅಂದ್ಕೊಂಡೆ ಇರಲಿಲ್ಲ. ನಿನ್ನ ಎದುರು ನಿಂತಾಗಲೆಲ್ಲ ನನ್ನ ಮೈಯೆಲ್ಲ ರೋಮಾಂಚನವಾದಂತಾಗುತ್ತೆ. ಕೈಯಲ್ಲಿ ನಡುಕ ಬಂದು ಹೇಳಬೇಕೆಂದಿದ್ದ ಮಾತುಗಳು ಉಡುಗಿಹೋಗುತ್ತೆ. ಏನೇನೋ ನೂರಾರು ಕನಸುಗಳು, ಹೇಳಲಾಗದ ಆಸೆಗಳು. ಏನು ಅಂತಾ ಹೇಳಲಾ...

ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ
ಗುಬ್ಬಿಯ ಹಾಗೆ ನಾ ಇರುವೆನು ನಿನ್ನಲಿ
ಅಪ್ಪಿಕೋ ನಿನ್ನಲಿ ನಿನ್ನೆದೆ ಚಿಪ್ಪಲಿ
ಸ್ವಾತಿಯ ಮುತ್ತಿನ ಹಾಗೆಯೇ ನಿನ್ನಲಿ...

ಎಂದೆಂದೂ ನೀ ನನ್ನ ಜೊತೆಯೇ ಇರ್ತಿಯಾ ಅಲ್ವ...

ಸಂಜೆಯ ಹೊತ್ತಲ್ಲಿ ಸಮುದ್ರದ ತೀರದಲ್ಲಿ ಸೂರ್ಯನ ಕಿರಣವು ಆಗಸವನ್ನು ಸುಂದರವಾದ ಬಣ್ಣಗಳಿಂದ ಕೆಂಪೇರಿಸುತ್ತೆ. ನೋಡು, ಆ ಸೌಂದರ್ಯವನ್ನು ನೋಡುತ್ತ ನಾನು ನೀನು ಮೈ ಮರೆಯಬೇಕು. ತಂಪಾದ ತಂಗಾಳಿಯನ್ನು ಸವಿಯುತ್ತಾ ನೀರಿನ ಅಲೆಗಳ ಮೇಲೆ ನೀನು ನಾನು ಜೊತೆ ಜೊತೆಯಲಿ ಹೆಜ್ಜೆ ಹಾಕಬೇಕು. ನಿನ್ನ ಎದೆ ಮೇಲೆ ನನ್ನ ಮುಖ ಇರಿಸಿ ಜಗತ್ತನ್ನೇ ನಾನು ಮರೀಬೇಕು. ನಿನ್ನ ಮಡಿಲಲ್ಲಿ ಮಲಗಿ ಸಣ್ಣ ಮಗುವಾಗಬೇಕು. ಇನ್ನೂ ಏನೇನೋ ಆಸೆ ಕಣೋ.

ನಾನು ನೀನು ಜೊತೆ ಸೇರಿ ನಮ್ಮದೇ ಆದ ಪ್ರೀತಿಯ ಗೂಡನ್ನು ಪುಟ್ಟದಾಗಿ ಕಟ್ಟಿ ಅಲ್ಲೇ ಸಂತೋಷವಾಗಿ ಕಳೆಯಬೇಕು. ನಿನ್ನ ನಾನು, ನನ್ನ ನೀನು ತುಂಬಾ ತುಂಬಾನೇ ಪ್ರೀತಿಸಬೇಕು. ಏನು, ಹುಚ್ಚಿ ತರ ಬರೀತಿದಾಳೆ ಅಂತ ಅಂದ್ಕೊತೀಯಾ. ಹೌದು ಕಣೋ ನಾನು ಹುಚ್ಚಿನೇ. ನಿನ್ನ ಪ್ರೀತಿಲಿ ನಾನು ಹುಚ್ಚಿ.
ಹೇಳು ನನ್ನ ಜೊತೆ ಇರ್ತಿಯಾ ಅಲ್ವ....

ನಿನ್ನವಳು

ಭಾನುವಾರ, ಸೆಪ್ಟೆಂಬರ್ 14, 2008

ಪ್ಲೀಸ್...ಸಾಕು

ಬೆಳಗ್ಗೆ ಪೇಪರ್ ನೋಡುತ್ತಿದ್ದಂತೆಯೇ ಸರಣಿ ಸ್ಫೋಟ, 30 ಸಾವು. ಇದೇನು ಮಹಾ!. ದೇಶದ ಹಣದುಬ್ಬರ ಏರಿಳಿಯುವಂತೆ ಇದೂ ಸಾಮಾನ್ಯ ಸಂಗತಿ. ಇಂತಹ ಅಭಿಪ್ರಾಯ ಜನಸಾಮಾನ್ಯರಿಂದ ವ್ಯಕ್ತವಾದರೆ ಅಚ್ಚರಿಯೇನಲ್ಲ.

ಬೆಳಗ್ಗಿನ ಓಡಾಟ, ಬಸ್ಸು, ಟ್ರಾಫಿಕ್ಕು, ಆಫೀಸ್, ಮತ್ತೆ ಬಸ್ಸು, ಟ್ರಾಫಿಕ್ಕು, ಕಿರಿಕ್ಕು... ಇವುಗಳ ನಡುವೆ ಬಾಂಬ್ ಸ್ಫೋಟ, ರಕ್ತಪಾತ. ಪರವಾಗಿಲ್ಲ. ನಾವು ಅಡ್ಜಸ್ಟ್ ಮಾಡ್ಕೋತೀವಿ. ಏಕೆಂದರೆ ನಾವು ಇರೋದು ಅದಕ್ಕೆ ಅಲ್ಲವೇ.

ಮೊನ್ನೆಯಷ್ಟೇ ನಾವೆಲ್ಲ ನಡೆದಾಡುವ ಬೆಂಗಳೂರಿನ ಫುಟ್ ಪಾತ್ ನಲ್ಲಿ ಸ್ಫೋಟಗಳಾದವು. ಒಂದಲ್ಲ, ಎರಡಲ್ಲ ಒಂಭತ್ತು ಸ್ಫೋಟ. ಅಲ್ಲಿಯವರೆಗೂ ನಿದ್ರೆಯಲ್ಲಿದ್ದ ಸರ್ಕಾರ ಮತ್ತು ಪೊಲೀಸನವರು, "ಮಲಗಿದ ಹುಲಿಯನ್ನು ಎಬ್ಬಿಸಿದ್ದೀರಿ, ನಿಮ್ಮ ಸಾವನ್ನು ನೀವೇ ಆಹ್ವಾನಿಸಿದ್ದೀರಿ" ಎಂಬಂತೆ ಅಬ್ಬರಿಸಿದರು. ಬೆನ್ನಲ್ಲೇ, ಅಲ್ಲಲ್ಲಿ ದಾಳಿ, ಶಂಕಿತರ ಬಂಧನ, ಪಿತೂರಿ, ಖಂಡನೆ, ಸಂತ್ರಸ್ತರಿಗೆ ಪುಡಿಗಾಸು... ಹೀಗೇ ವಿಧವಿಧ ಹೆಡ್ಡಿಂಗ್್ಗಳು ಪತ್ರಿಕೆಗಳಲ್ಲಿ ರಾರಾಜಿಸಿದವು. ಇದರೊಂದಿಗೆ, ಆರೋಪ-ಪ್ರತ್ಯಾರೋಪಗಳು ಯಥೇಚ್ಛೆವಾಗಿಯೂ ಹರಿದುಬಂದವು. ಆಮೇಲೆ...ಬೆಂಗಳೂರಿನ ಟ್ರಾಫಿಕ್ ಗಲಾಟೆ ನಡುವೆ ಬಾಂಬ್ ಸದ್ದು ಕೇಳಲೇ ಇಲ್ಲ.

ಆದರೆ ಇದರಿಂದ ಲಾಭ ಆಗಿದ್ದಾದ್ದರೂ ಯಾರಿಗೆ? ಬಾಂಬ್ ಸ್ಫೋಟ ಮಾಡಿದವರು ‘ಜಿಹಾದ್' ಅಥವಾ ಸೇಡು ಅಂತಾರೆ. ಆಮೇಲೆ ಯಾವುದೋ ಮೂಲೆಯಲ್ಲಿ ಅಡುಗಿ ಕುಳಿತುಕೊಳ್ಳುತ್ತಾರೆ. ಅಲ್ಲಿಗೆ ಅವರ ಮಹಾನ್ ಸಾಧನೆ (!) ಮುಗಿಯಿತು. ಅವರನ್ನು ಹಿಡಿಯಲಾಗದ ಪೊಲೀಸರು ಪತ್ರಿಕೆಗಳ ಮುಂದಷ್ಟೇ ಅಬ್ಬರಿಸುತ್ತಾರೆ. ಕೆಲ ದಿನಗಳ ನಂತರ ಬಿಸಿ ಆರಿದ ಮೇಲೆ ಬಾಂಬ್ ಮಾತೇ ಇಲ್ಲ. ಇನ್ನೂ ರಾಜಕಾರಣಿಗಳು ಇದನ್ನೇ ಯದ್ವಾತದ್ವಾ ಎಳೆದಾಡಿ ತಮ್ಮ ಓಟ್ ಬ್ಯಾಂಕ್ ಮಾಡಿಕೊಳ್ಳುತ್ತಾರೆ. ಹೋಗಲೀ ಬಿಡಿ ಅದೆಲ್ಲ ಅವರ ಸ್ವಹಿತಾಸಕ್ತಿ.

ಆದರೆ, ಬಲಿಯಾದವನು ಬಡಪಾಯಿ ಪ್ರಜೆ ಮಾತ್ರ. ಸಾವಿನ ಮನೆ ತಲುಪುವವನು ಜನಸಾಮಾನ್ಯ. ಬೀದಿಗೆ ಬರುವುದು ಆತನ ಕುಟುಂಬ. ಭಿಕ್ಷೆ ಬೇಡುವುದು ಬಡವನ ಮಕ್ಕಳು... ಆಮೇಲೆ ಈ ಸತ್ತವ, ಆತನ ಕುಟುಂಬ ಎಲ್ಲೋ ನಶಿಸಿ ಹೋಗುತ್ತದೆ. ಕೇಳುವವರು ಯಾರೂ ಇಲ್ಲ.

ಆದರೆ, ಬೇರೆಲ್ಲವೂ ಸಾಮಾನ್ಯವಾಗಿಯೇ ಇರುತ್ತದೆ. ಜನಜೀವನ ಸಾಮಾನ್ಯ, ಸರ್ಕಾರದ ಕುರ್ಚಿ ಭದ್ರ, ಎಂದಿನಂತೆ ಟ್ರಾಫಿಕ್, ಯಾಂತ್ರಿಕ ಜೀವನ... ಮುಂದೇನು? ಮತ್ತೆ ಸರಣಿ ಸ್ಫೋಟ!

ಹೌದು. ಈಗ ಆಗಿದ್ದು ಇದೇ. ಬೆಂಗಳೂರು, ಅಹ್ಮದಾಬಾದ್ ಇದೀಗ ದೆಹಲಿ.....ಮುಂದೆ? ಇದಕೆಲ್ಲ ಅಂತ್ಯ ಯಾವಾಗ? ನಾವು ನಿರಮ್ಮಳವಾಗಿ ಬದುಕುವುದು ಯಾವಾಗ? ಸೇಡು ಯಾವಾಗ ಮುಗಿಯುತ್ತೆ? ಬಡವರ ರಕ್ತ ಬೀದಿಪಾಲಾಗುವುದು ನಿಲ್ಲುವುದ್ಯಾವಾಗ?