ಬುಧವಾರ, ಆಗಸ್ಟ್ 20, 2008

ಪಾರ್ಟಿ ಕೊಟ್ಟು ಡಾಕ್ಟರ್ ಆದ...

ಮೊನ್ನೆ ಊರಿಗೆ ಹೋಗಿದ್ದಾಗ ಧೋ ಅಂತಾ ಮಳೆ. ಅಪರೂಪಕ್ಕೊಮ್ಮೆ ಊರಿಗೆ ಹೋದ್ರೂ ಹೊರಗೆ ಹೋಗದಂತ ಸ್ಥಿತಿ. ಎರಡು ದಿನ ಮನೆಯಿಂದ ಹೊರಗೆ ಹೋಗದಂತೆ ಮಳೆ ಕಟ್ಟಿಹಾಕಿತ್ತು. ಹಾಗೇ ಮನೆಯಲ್ಲಿ ಬೆಚ್ಚಗೆ ಕುಳಿತು ಆಗೊಮ್ಮೆ ಈಗೊಮ್ಮೆ ಆಡುಗೆ ಮನೆ ಇಣುಕಿ ಬಿಸಿ ಟೀ ಚಪ್ಪರಿಸಿ ಟಿವಿಯಲ್ಲಿ ಚಾನೆಲ್ ಸುತ್ತುವರಿಯುತ್ತಿದ್ದೆ. ಇನ್ನೇನು ಸಂಜೆ ಆಗಿತ್ತು ಮನೆಗೆ ಅಕ್ಕನ ಕುಟುಂಬದ ಮೆರವಣಿಗೆ ಬಂತು.

ಮಳೆಯಲ್ಲಿ ಸಂಪೂರ್ಣ ನೆನೆದು ಬಂದಿದ್ದ ಅವರು ಊಟ ಮಾಡಿ ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ನನ್ನ ಮುದ್ದಿನ ಹುಡುಗಿಗೆ ವಿಪರೀತ ಜ್ವರ, ನೆಗಡಿ. ಜ್ವರದಿಂದ ನನ್ನ ಹುಡುಗಿ ಮೆತ್ತಾಗಿಗಿದ್ಲು. ಹಣೆ ಮುಟ್ಟಿ ನೋಡಿದೆ ಬೆಂಕಿಯಾಗಿತ್ತು. ಮನಸ್ಸು ಮುದುಡಿದಂತಾಯಿತು. ಇನ್ನೂ 4 ವರ್ಷದ ಮಗುವಲ್ವಾ ಪ್ರೀತಿ ತುಂಬಿ ಬಂತು. ಆದರೆ, ರಾತ್ರಿ 11 ಗಂಟೆಗೆ ಯಾವ ಅಂಗಡಿ, ಆಸ್ಪತ್ರೆ ತೆರೆದಿರುತ್ತೆ ಅಂತಾ ಯೋಚಿಸ್ತಿದ್ದೆ.

ಅಷ್ಟರಲ್ಲಿ ನೆನಪಾದವನು ನನ್ನ ಗೆಳೆಯ, ವೃತ್ತಿಯಲ್ಲಿ ವೈದ್ಯ, ಡಾ.ಮರೆಪ್ಪ. ಕೂಡಲೇ ಮೊಬೈಲು ಕಿವುಚಿ ಅವನಿಗೆ ಫೋನ್ ಮಾಡಿದೆ. ಇನ್ನೂ ತನ್ನ ಕ್ಲಿನಿಕ್‌ನಲ್ಲಿಯೇ ಇದ್ದ ಡಾಕ್ಟರ್‌ಗೆ ಮಗುವಿನ ಅನಾರೋಗ್ಯದ ಕುರಿತು ಹೇಳಿದೆ. ಐದೇ ನಿಮಿಷದಲ್ಲಿ ಬರ್ತೀನಿ ಅಂತಾ ಫೋನಿಟ್ಟ. ಮನೆಯವರಿಗೆ ವಿಷಯ ತಿಳಿಸಿ ನನ್ನ ಕೋಣೆಗೆ ಬಂದಾಗ ಗೆಳೆಯರ ಬಳಗದಲ್ಲಿಯೇ ವಿಶೇಷವೆನಿಸಿದ್ದ ಮರೆಪ್ಪನ ಹಿಂದಿನ ತುಂಟಾಟಗಳು ನೆನಪಾದವು.

----
ಮರೆಪ್ಪ ನನ್ನ ಬಾಲ್ಯ ಸ್ನೇಹಿತ. ಓದಿನಲ್ಲಿ ಚುರುಕಿದ್ದರೂ ಭಯಂಕರ ತುಂಟಾಟ ಮಾಡುತ್ತಿದ್ದ. ಹೊಡೆತಕ್ಕೂ ಸೈ, ಹೊಡೆಯುವುದಕ್ಕೂ ಸೈ. ಪ್ರೌಢ ಶಾಲೆಯ ಬಳಿಕ ವಿಜ್ಞಾನ ವಿಷಯ ಪಡೆದು ಬೇರೆ ಕಾಲೇಜು ಸೇರಿಕೊಂಡ ಮರೆಪ್ಪ ಪ್ರತಿ ದಿನ ಸಂಜೆ ಭೇಟಿಯಾಗುತ್ತಿದ್ದ. ನಮ್ಮ ಸ್ನೇಹಿತರ ಗುಂಪಲ್ಲಿ ಮರೆಪ್ಪ ಇಲ್ಲದಿದ್ದರೆ ಏನೋ ಕೊರತೆ.

ಅದೇನಾಯಿತೋ ಒಂದು ದಿನ ನಮ್ಮೊಂದಿಗೆ ಕಾಲು ಕೆರೆದು ಜಗಳ ತೆಗೆದ. "ಇನ್ನೂ ಮುಂದೆ ನೀವೆಲ್ಲ ನನ್ನ ಮರೆಪ್ಪ ಅಂತಾ ಕರೀಬೇಡ್ರಿ. ನಾನು ಈಗ ಬಿಎಎಂಎಸ್ ಮಾಡ್ತೀದೀನಿ. ಮರೆಪ್ಪ ಅಂತಾ ಕರೆದ್ರೆ ಒಂಥರಾ ಆಗುತ್ತೆ" ಎಂದ. ನಮಗೆಲ್ಲ ಇನ್ನೂ ಗೇಲಿ ಮಾಡಬೇಕೆನಿಸಿತು. "ಹಾಗಾದ್ರೆ ಏನು ಅಂತಾ ಕರೀಬೇಕು" ಅಂದಾಗ, "ನಾನು ಮರೆಪ್ಪ ಬದಲಿಗೆ ಮಂಜು ಅಂತಾ ಹೆಸರು ಇಟ್ಕೋಂಡಿದೀನಿ. ಇನ್ಮೇಲೆ ನೀವು ಡಾ.ಮಂಜು ಅಂತಾ ಕರಿಬೇಕು" ಎಂದು ಹೇಳಿದ.

ಆಗ ನಾವೆಲ್ಲ ಆಯ್ತಪ್ಪಾ ಹಾಗೇ ಕರಿತೀವಿ. ಆದ್ರೆ ನಮಗೆಲ್ಲರಿಗೂ ನೀನು ಪಾರ್ಟಿ ಕೋಡ್ಬೇಕು ಅಂತಾ ಹೇಳಿದಾಗ ಅದ್ಯಾವ್ ಪರಿ ಖುಷಿ ಆಯ್ತೋ, ಕೂಡಲೇ ಸುಮಾರು 15 ಹುಡುಗರ ಗುಂಪನ್ನು ನಮ್ಮೂರಿನ ಅತೀ ದೊಡ್ಡ ಹೋಟೇಲ್‌ಗೆ ಕರೆದೋಯ್ದು ಊಟದ ಪಾರ್ಟಿ ನೀಡಿದ.

ಎಲ್ಲರೂ ತಿಂದು-ತೇಗಿ ಹರಟೆ ಹೊಡೆಯುತ್ತ ಮನೆಕಡೆ ಬರುತ್ತಿದ್ದಾಗ ಎದುರಿಗೆ ಬಂದ ಇನ್ನೊಬ್ಬ ಗೆಳೆಯ, ಏನೋ ಇಷ್ಟೊಂದು ಜನ ಎಲ್ಲಿಗೆ ಹೋಗಿದ್ರಿ ಅಂತಾ ಕೇಳಿದ. ಆಗ ನಾವೆಲ್ಲ "ಮರೆಪ್ಪ, ನಮಗೆಲ್ಲ ಪಾರ್ಟಿ ಕೊಟ್ಟ. ಇನ್ಮೆಲೆ ಅವನಿಗೆ ಮರೆಪ್ಪ ಅಂತಾ ಕರೀಬಾರ್ದು, ಮಂಜು ಎಂದು ಕರೀಬೇಕಂತೆ. ಅದಕ್ಕೆ ಪಾರ್ಟಿ" ಅಂತಾ ಅಂದಾಗ ಮರೆಪ್ಪನ ಮುಖ ಇಂಗು ತಿಂದ ಮಂಗನ ಹಾಗಾಗಿತ್ತು.

ಇಂತದ್ದೆ ಇನ್ನೊಂದು ಪ್ರಸಂಗ. ನಮ್ಮ ಮರೆಪ್ಪನಿಗೆ ಆಯುರ್ವೇದದ ಮೇಲೆ ಅದ್ಯಾವ್ ಪರಿ ನಂಬಿಕೆ ಇತ್ತು ಅಂದ್ರೆ ತನ್ನ ಮೇಲೆಯೇ ಹೊಸ ಹೊಸ ಪ್ರಯೋಗ ಮಾಡುತ್ತಿದ್ದ. ಇನ್ನೂ 24 ದಾಟದ ಮರೆಪ್ಪನಿಗೆ ಕೂದಲು ಉದುರತೊಡಗಿದವು. ನಾವೆಲ್ಲ ಗೇಲಿ ಮಾಡ್ತೀವಿ ಅಂತಾ, ಮೊದಲೇ ಯಾವುದೋ ಆಯುರ್ವೇದದ ಔಷಧಿ ಖರೀದಿಸಿ ತಲೆಗೆ ಬಳಿದುಕೊಂಡಿದ್ದ. ಮರುದಿನ ಅವನ ಮುಖ ದೊಡ್ಡ ಕುಂಬಳಕಾಯಿ ಗಾತ್ರದಲ್ಲಿ ಬಾತುಕೊಂಡಿತ್ತು. ಮತ್ತೆ ಅದು ಕಡಿಮೆ ಆಗಲು ಇನ್ನೊಂದು ಔಷಧಿ ತೆಲೆಗೆ ಬಳಿದುಕೊಂಡ!.

ಇಂತಿಪ್ಪ ನಮ್ಮ ಮರೆಪ್ಪ, ಕ್ಷಮಿಸಿ ಈಗ ಮಂಜು ಬಿಎಎಂಎಸ್ ಮುಗಿಸಿ ಡಾಕ್ಟರ್ ಆದ. ಹುಬ್ಬಳ್ಳಿಯಲ್ಲಿ ಒಂದೆರಡು ದೊಡ್ಡ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡಿ ಹೆಸರೂ ಮಾಡಿದ್ದಾನೆ. ಮೊನ್ನೆ ಮೊನ್ನೆ ನನ್ನ ಕೈಗೆ ದೊಡ್ಡ ಗಾಯವಾದಾಗ ಇವನೇ ಚಿಕ್ಕದಾಗಿ ಆಪರೇಶನ್ ಕೂಡ ಮಾಡಿ ಚಿಕಿತ್ಸೆ ನೀಡಿದ್ದ. ಇತ್ತೀಚೆಗಷ್ಟೇ ವಾಪಾಸ್ ನಮ್ಮ ಸೌಗಂಧಿಗೆ ಬಂದು ಇಲ್ಲಿಯೇ ಒಂದು ಪುಟ್ಟ ಕ್ಲಿನಿಕ್ ತೆಗೆದಿದ್ದಾನೆ. ನಮ್ಮ ಸ್ನೇಹಿತರಿಗೆ ಹಾಗೂ ನಮ್ಮ ಕುಟುಂಬಗಳಿಗೆ ಈಗ ಇವನೇ ಫ್ಯಾಮೀಲಿ ಡಾಕ್ಟರ್.
----

ಬಾಗಿಲ ಬಳಿ ಬೈಕ್ ಸದ್ದು ಕೇಳಿದಾಗ ನೆನಪಿನಂಗಳದಿಂದ ಹೊರಗೆ ಬಂದೆ. ಡಾ.ಮರೆಪ್ಪ ನಗುತ್ತಾ ಬಾಗಿಲ ಬಳಿ ನಿಂತಿದ್ದ. ಸ್ನೇಹಿತನಾದರೂ ಈಗ ಡಾಕ್ಟರ್‌ನಾದ್ದರಿಂದ ನೇರವಾಗಿ ವಿಷಯಕ್ಕೆ ಬಂದ. ಅಕ್ಕನ ಮಗುವನ್ನು ಪರೀಕ್ಷಿಸಿ ತನ್ನಲ್ಲಿದ್ದ ಒಂದಿಷ್ಟು ಔಷಧಿ ಕೊಟ್ಟು ಇವತ್ತು ರಾತ್ರಿಗೆ ಇದನ್ನು ಕೊಡಿ. ನಾಳೆ ನಾನು ಬರೆದು ಕೊಡುವ ಔಷಧಿ ತಂದು ಕೊಡಿ ಎಂದು ಹೇಳಿದ.

ಹೊರಗೆ ಬಂದು ಆತನ ಕೈಕುಲುಕಿ, ನಡುರಾತ್ರಿಯಲ್ಲಿ ಬಂದು ಸಹಾಯ ಮಾಡಿದ್ದಕ್ಕೆ ಥ್ಯಾಂಕ್ಸ್ ಡಾ. ಮರೆಪ್ಪ ಅವರೇ ಎಂದು ಹೇಳಿದಾಗ, "ನಾನು ಮರೆಪ್ಪ ಅಲ್ಲ, ಡಾ.ಮಂಜು. ನಾಳೆ ಬೆಳಗ್ಗೆ ಕ್ಲಿನಿಕ್ ಹತ್ರ ಬಾ ಡಬ್ಬಲ್ ಫೀ ತಗೋತೀನಿ" ಎಂದಾಗ ನನಗೆ ನಗು ತಡೆಯಲಾಗಲಿಲ್ಲ.