ಭಾನುವಾರ, ಜುಲೈ 7, 2013

ಅರ್ಥವಾಗದವನು

ಒಂದೇ ಸಮನೆ ನಡೆದು ನಡೆದು ಕಾಲು ಬಸವಳಿದಿತ್ತು. ಅಲ್ಲೊಂದು ಖಾಲಿ ಬೆಂಚ್ ಕಂಡಾಗ ಏನೋ ಸಮಾಧಾನ. ಹಾಗೇ ಒರಗಿ ಸುಧಾರಿಸಿಕೊಳ್ಳುವಾಗ ಅವಳ ಮಾತು ನೆನಪಾಗಿ ಎದೆಯಲ್ಲಿ ಚುಚ್ಚಿದ ನೋವು.

‘ನಿಂಗೇನಪ್ಪಾ, ಎರಡು ಯಾಕೆ ನಾಲ್ಕು ಆಗು. ಯಾರು ಕೇಳೋರು....?’ ಎಂಬ ಮಾತು ಪದೆ ಪದೇ ಕೇಳುತ್ತಿತ್ತು. ಕೆಲಸ ಮಾಡಲಾಗದೇ ಎದ್ದುಬಂದಿದ್ದೆ. ತುಂಬಾ ದೂರ. ಎಲ್ಲಿಗೆ, ಏಕೆ ಹೋಗಬೇಕು ಎಂಬ ಅರಿವಿಲ್ಲದೆ ನಡೆಯುತ್ತಿದೆ. ನಡೆದು ನಡೆದು ಕಾಲಲ್ಲಿ ನೋವು ಕಾಣಿಸಿಕೊಂಡಾಗ ವಾಸ್ತವ ಎದುರಾಯಿತು. ಸಿಕ್ಕ ಬೆಂಚಲ್ಲಿ ಕಾಲು ಚಾಚಿ ಕುಳಿತಾಗ ನನ್ನ ನಾನು ಕಂಡೆ.

ಅರೇ, ನನ್ನನ್ನು ನಾನೇ ನೋಡಿ ಎಷ್ಟೋ ವರ್ಷಗಳಾದವಲ್ಲ. ತುಂಬಾ ಓಡಿದ್ದೇನೆ. ಬದುಕು ಕಟ್ಟಿಕೊಳ್ಳಬೇಕೆಂಬ ಹವಣಿಕೆಯಲ್ಲಿ ಎಲ್ಲೆಲ್ಲೂ ನಡೆದಿದ್ದೇನೆ. ಹೀಗೆ ನಡೆಯುವಾಗ ಯಾರೋ ಪರಿಚಯವಾದರು, ಇಷ್ಟವಾದರೂ, ಕೆಲವರು ತುಂಬಾ ಇಷ್ಟವಾದರು. ಆದರೆ, ಬದುಕಬೇಕು, ಏನಾದರೂ ಸಾಧಿಸಬೇಕು ಎಂಬ ಕಾಲಚಕ್ರ ಕಟ್ಟಿಕೊಂಡವನಿಗೆ ಕೆಲವರು ಆಪ್ತರಾದರು, ಇನ್ನೂ ಕೆಲ ಆಪ್ತರೇ ದೂರಾದರು. ನಾನು ಹೀಗೇ ಬದಲಾಗಿದ್ದು ಅವರಿಗೆ ಇಷ್ಟ ಆಗಲಿಲ್ಲ. ಬೈದರು. ದ್ವೇಷಿಸಿದರು.

ನಾನೇ ದೂರವಾದೇ ಎಂದು ಅಂದುಕೊಂಡು ತಿರುಗಿ ನೋಡಿದಾಗ ಅವರೇ ನನ್ನಿಂದ ತುಂಬಾ ದೂರವಾಗಿದ್ದರು. ಆಗಲಿ ಬಿಡು, ಮೊದಲು ಗುರಿ ಮುಟ್ಟೋಣ. ಆಗ ಎಲ್ಲರಿಗೂ ನಾನು ಮಾಡಿದ್ದು ಸರಿ ಅನಿಸಬಹುದು ಎಂದು ಮುನ್ನಡೆದೆ. ಬಹುಷಃ ಅವರಿಗೆ ನಾನು ಅರ್ಥವಾಗಲಿಲ್ಲ. ಇನ್ನೂ ಅರ್ಥವಾಗಿಲ್ಲ. ಮುಂದೆಯೂ...

ಇರಲಿ. ಅವರಿಗೆ ನನ್ನ ಸ್ಥಿತಿ ತಿಳಿಯುವುದು ಬೇಡ. ಅದು ನಾಟಕೀಯವಾಗಬಹುದು. ಬೆಂಬಲಗಳು ಇಲ್ಲದೇ ಕೇವಲ ಭರವಸೆಗಳ ಮೇಲೆ ಬದುಕು ಕಷ್ಟ ಎಂದು ಆಗ ನಾ ಅರಿತಿದ್ದೆ. ಒಬ್ಬನೇ ಹಠಕ್ಕೆ ಬಿದ್ದವನಂತೆ ಕೆಲಸ ಬದಲು ಮಾಡಿದ್ದೆ. ಅದು ಮುಂದೆ ಸಾಗಿ ಒಂದು ಹಂತಕ್ಕೆ ಬಂದಿದೆ. ಈಗ ಅವರಿಗೆ ಅರ್ಥ ಮಾಡಿಸಿ ನಾನು ಸಾಧಿಸಬಯಸುವುದು ಏನೂ ಇಲ್ಲ. ಅವರು ತಿಳಿರುವಂತೆಯೇ ಇರಲಿ. ನಾನು ಇರುವಂತೆಯೇ ಇರುತ್ತೇನೆ.

ಬುಧವಾರ, ಜೂನ್ 5, 2013

ಇನ್ನೂ ಸಾಕು... ಬಿಟ್ಟುಬಿಡು... ಎಲ್ಲ ಮರೆತುಬಿಡು...

ಯಾರೋ ಜೋರಾಗಿ ಬಾಗಿಲು ಬಾರಿಸಿದ ಸದ್ದು. ನಿದ್ರೆ ಕಸಿದುಕೊಂಡ ಅನುಭವ. ಪಿಳಿ ಪಿಳಿ ನೋಡುತ್ತ ಹೊರ ಬಂದಾಗ ಬಾಗಿಲಲ್ಲಿ ಬಿದ್ದಿತ್ತು ಪತ್ರಿಕೆ. ಇನ್ನೇನು ಒಳಗೆ ಹೋಗಬೇಕು ಎನ್ನುವಷ್ಟರಲ್ಲಿ ಹೊರಗೆ ಜೋರು ಮಳೆ.

ಅರೆರೇ... ಇಷ್ಟು ಬೇಗ ಮಳೆಗಾಲ ಶುರುವಾಯ್ತೇ... ಮುಂಗಾರು ಮಳೆಯ ಮೊದಲ ಸಂಭ್ರಮ... ಹಾಗಿದ್ದರೆ ಕರಾವಳಿಯಲ್ಲೂ ಮಳೆಯಾಗುತ್ತಿರಬಹುದು. ಹುಂ, ಅಲ್ಲಿ ವಿಪರೀತ ಮಳೆ... ಅಂದರೆ... ನನ್ನ ಮಳೆ ಹುಡುಗಿ... ಪ್ರೀತಿ... ನೋಟ... ಕಾಡು... ರಂಧ್ರದ ಕೊಡೆ...

ಮನಸ್ಸು ಕದಡಿ ಮಳೆ ನೀರಲ್ಲಿ ನೆನೆದ ಅನುಭವ. ಊಹುಂ. ಅವಳಿಗೆ ನನ್ನ ನೆನಪು ಇರಲಿಕ್ಕಿಲ್ಲ. ತುಂಬಾ ಪ್ರೀತಿ ಮಾಡಿ, ಈಗ ಅಷ್ಟೇ ಸೇಡು ತೀರಿಸಿಕೊಳ್ಳುತ್ತಿದ್ದಾಳೆ.

ಚಂದು ಅಕ್ಕಾ ಮೊನ್ನೆ ಮೇಲ್ ಮಾಡಿದ್ದಾಗ, `ಅವಳಿಗೆ ಮದುವೆ ಆಗಿದೆ ಕಣೋ. ಎರಡು ಮಕ್ಕಳಂತೆ. ನನಗೂ ಭೇಟಿ
ಮಾಡ್ಲಿಕ್ಕೆ ಆಗಿಲ್ಲ ತಮ್ಮಾ' ಎಂದು ಬರೆದಿದ್ದಳು.

ಇನ್ನೂ ಸಾಕು... ಬಿಟ್ಟುಬಿಡು... ಎಲ್ಲ ಮರೆತುಬಿಡು... ಕಳೆದ 6 ವರ್ಷದಿಂದ ಮನಸ್ಸು ನನ್ನ ತಿದ್ದಿ ತೀಡಿದ್ದರೂ... ಈ ಮಳೆ ಮನಸ್ಸಿನ ಮರೆಯನ್ನು ಅಳಿಸಿ, ಮರೆತದ್ದನ್ನೆಲ್ಲ ಮತ್ತೆ ನೆನಪು ಮಾಡಿದೆ.