ಶುಕ್ರವಾರ, ಜುಲೈ 25, 2008

ಸಾಗರ ತಟದೀ ಚಿತ್ತ ಚಂಚಲೆ...


"ನೋ ಅದು... ನೀರಲ್ಲೇ ಹೋಗ್ತಿಯಾ.. ನೋಡು ಪ್ಯಾಂಟ್ ಎಲ್ಲಾ ಗಲೀಜಾಯ್ತು. ಇನ್ನೂ ಚಿಕ್ಕ ಹುಡುಗನಪ್ಪಾ ನೀನು" ಎಂದು ಆಕೆ ಹುಸಿಕೋಪದಿಂದ ಗುಣುಗುತ್ತಿದ್ದರೆ ಅವಳ ಮುಖವನ್ನು ಇನ್ನಷ್ಟು ಕೆಂಪಾಗಿಸಬೇಕೆಂಬ ಆಸೆ ಹೆಚ್ಚಾಯ್ತು.

"ಆಗಲೀ ಬಿಡೆ. ಸಮುದ್ರ ತೀರದಲ್ಲಿ ನೀರಿನೊಂದಿಗೆ ಚೆಲ್ಲಾಟ ಆಡೋಕೆ ನಂಗಿಷ್ಟ. ನೀನು ಬಾರೇ. ಸೊಗಸಾಗಿದೆ" ಎಂದಾಗ ಅವಳು ಮುಖ ಸೊಟ್ಟಗೆ ಮಾಡಿದಳು.

ಆಹಾ..ಏನು ಚಂದ ಕಾಣಿಸ್ತಿಯೇ ಎಂದೊಡನೆ ಗಲ್ಲ ಉಬ್ಬಿಸಿ, ಹೌದೌದು. ಸಾಕು ಆಟ ಎಂದು ಗುರುಗುಟ್ಟಿದಳು.

ಇನ್ನೂ ಪೀಡಿಸಿದರೆ ಬೈದಾಳು ಅಂತಾ ದಂಡೆಗೆ ಬಂದೆ. ಆಗಲೇ ತೊಯ್ದು ತೊಪ್ಪಗಾಗಿದ್ದ ನನ್ನ ಪ್ಯಾಂಟು ಮರಳನ್ನು ಅಪ್ಪಿಕೊಳ್ಳಲಾರಂಭಿಸಿತು.

"ನೋಡಿದೀಯಾ. ಪ್ಯಾಂಟ್ ಹೇಗಾಯ್ತು. ನಾನು ಹೇಳಿದ್ರೆ ಕೇಳೋಲ್ಲ ನೀನು" ಎಂದು ಕೋಪಿಸಿದಳು. "ಇರಲಿ ಬಿಡೆ. ಬಯಲುಸೀಮೆ ಹುಡುಗ ನಾನು. ಇಂಥಾ ಸುಂದರ ಸಮುದ್ರ ಕಾಣೋದೇ ನನಗೆ ಅಪರೂಪ. ಅದಕ್ಕೆ ಮನಸಾಯ್ತು. ಹೌದು, ಇಷ್ಟೊಂದು ಸುಂದರ ಸಾಗರ ತೀರ, ಗರಿಗರಿ ಮರಳ ನಡುವೆ ಮನೆ ಇದ್ದರೂ ಬೀಚ್್ಗೆ ಬರೋಕೆ ನಿನಗ್ಯಾಕೆ ಇಷ್ಟ ಇಲ್ಲ" ಅಂತಾ ಪ್ರಶ್ನಿಸಿದೆ.

ಅಯ್ಯೋ, ದಿನಾಲು ಇದೇ ತೀರದಲ್ಲಿ ಓಡಾಡ್ತೀವಿ. ಇದರಲ್ಲೆನೋ ವಿಶೇಷ ಎಂದಾಕೆ ಹೇಳಿದಾಗ ನನಗೇನು ಹೇಳ್ಬೇಕು ತಿಳಿಲಿಲ್ಲ. ನಮಗೆ ದೂರದ ಬೆಟ್ಟ ನುಣ್ಣಗೆ, ಆದರೆ ಅವಳಿಗೀದು ಸಹಜ ಸಂಗತಿ. ಅದೂ ನಿಜಾನೇ ಅಂತಾ ಸುಮ್ಮನಾದೆ.

ಆಗಲೇ ಸೂರ್ಯ ನೆತ್ತಿಗೇರಿ ನಮ್ಮ ನೆತ್ತಿ ಸುಡುತ್ತಿದ್ದ. ಅವಳು ತನ್ನ ದುಪ್ಪಟ್ಟಾವನ್ನೇ ತಲೆಗೆ ಸುತ್ತಿಕೊಳ್ಳುತ್ತಾ, ಸಾಕು ಬಾ ಹೋಗೋಣ ಎಂದು ಕೈಹಿಡಿದು ಮುನ್ನಡೆದಳು.

"ಹೌದು ಏಕಾಏಕಿ ನನ್ನ ಹುಡುಕಿಕೊಂಡು ಇಲ್ಲಿಗೇಕೆ ಬಂದೆ. ದಿನಾಲೂ ಭೇಟಿಯಾಗ್ತಿವಲ್ಲ. ಏನು ವಿಶೇಷ" ಎಂದು ಹುಬ್ಬೇರಿಸಿದಳು.

ಹಾಗೇ ಸುಮ್ಮನೆ ಬರಬೇಕು ಅನಿಸ್ತು ಬಂದೆ. ಅಲ್ಲದೇ... ಎಂದು ಮಾತು ನಿಲ್ಲಿಸಿದಾಗ, ತುಸು ನಿಂತು ಏನೆಂದು ಪ್ರಶ್ನಿಸಿದಳು.

ಖಾಲಿ ಕೈ ಬೀಸುತ್ತಾ ಬಂದಿದ್ದ ನಾನು ಕಿಸೆಗೆ ಕೈಹಾಕಿ ಚಿಕ್ಕ ಪೊಟ್ಟಣವೊಂದನ್ನು ಅವಳ ಕೈಗಿತ್ತೆ. ನನ್ನ ಮುಖ ನೋಡಿ ಅಚ್ಚರಿಯೊಂದಿಗೆ ಬಿಚ್ಚಿ ನೋಡಿದಳು. ಅವಳ ಪುಟ್ಟ ಕೈ ತುಂಬುವಷ್ಟು ಬಳೆಗಳು. ಖುಷಿಯಿಂದ ಮುಟ್ಟಿ ನೋಡಿ ಕಣ್ಣಲ್ಲೇ ಥ್ಯಾಂಕ್ಸ್ ಹೇಳಿದಳು. ನಾಳೆ ಹಾಕಿಕೊಂಡು ಬಾ. ನೋಡ್ಬೇಕು ಅಂದೆ.

ಅದೇ ಮೊದಲ ಬಾರಿ ಒಂದು ಮಾತೂ ಆಡದೇ ಮುಗ್ಧ ಮೊಗದೊಂದಿಗೆ ನನ್ನೆಡೆಗೆ ಪ್ರೀತಿಯಿಂದ ನೋಡಿ, ಕಣ್ಣೊಳಗಿನ ಮಾತು ಅರಿತು ಸುಮ್ಮನಾದಳು. ನಾಲ್ಕು ಹೆಜ್ಜೆ ಸವೆದರೂ ಇಬ್ಬರ ನಡುವೆ ಮೌನವೇ ಮಾತಾಯಿತು.

"ಸರಿ, ನಂಗೆ ಟೈಮಾಯ್ತು. ಮನೆಯಲ್ಲಿ ಕಾಯ್ತಿರ್ತಾರೆ. ನಾಳೆ ಸಿಗ್ತೀನಿ" ಎಂದು ದಾರಿ ಬದಲಿಸಿದಳು.

ಮಾತು ಮರೆತಿದ್ದ ನಾನು, ಹೂಂಗುಟ್ಟಿ ಮುಂದೆ ನಡೆದೆ. ತುಸು ದೂರ ಸಾಗಿದ ಮೇಲೆ ತಿರುಗಿ ನೋಡಿದರೆ, ಮನೆಯ ಮೂಲೆಯಲ್ಲಿ ನಿಂತಿದ್ದಳು ನನ್ನ ಚಿತ್ತ ಚೆಂಚಲೆ ಚಿತ್ರಾವತಿ. ಆ ಮುದ್ದು ಮುಖವ ಮನದಲ್ಲಿ ತುಂಬಿ ಮುಂದೆ ಸಾಗಿದೆ.

ಮರುದಿನ ಎದುರು ಸಿಕ್ಕಾಗ, ತನ್ನೆರಡು ಕೈ ಮೇಲೆತ್ತಿ ಬಳೆಗಳ ಗಲ್್ಗಲ್ ನಾದ ಹೊರಡಿಸಿದಾಗ ನನ್ನೆದೆಯಲ್ಲಿ ಪ್ರೀತಿಯ ಕಲರವ ಅಲೆಯಾಗಿ ಬಂತು...

ಮಂಗಳವಾರ, ಜುಲೈ 22, 2008

ಯಾರಿವಳು ಸೌಗಂಧಿ...?

ನಿಮಗೂ ಈ ಪ್ರಶ್ನೆ ಕಾಡಿರಬಹುದಲ್ಲವೇ? ಬಹುಷಃ ಯಾವುದೋ ಹುಡುಗಿಯ ಹೆಸರೋ ಅಥವಾ ಆಕೆಯ ಹೆಸರು ಸೂಚಿಸುವ ಕಲ್ಪನೆಯ ಹೆಸರು ಇರಬಹುದು ಎಂದು ಅನಿಸುವುದು ಉಂಟು. ನಿಮ್ಮ ಕಲ್ಪನೆ ಸ್ವಲ್ಪ ನಿಜವೂ ಹೌದು. ಇವಳು ನನ್ನ ಸುಂದರಿಯೇ.


ಹೆಸರು ಸೌಗಂಧಿ. ಪೂರ್ಣ ಹೆಸರು ಸೌಗಂಧಿಪುರ. ನದಿಯಂಚಿನಲ್ಲಿ ಗುಡ್ಡಗಳ ಸಾಲುಗಳ ನಡುವೆ ನಿಂತಿರುವ ನಯನ ಮನೋಹರಿ... ಅರ್ಥವಾಯಿತೆಂದುಕೊಂಡಿದ್ದೇನೆ. ಇದು ನನ್ನ ಊರು. ರಾಜ ಮಹಾರಾಜರ ಕಾಲದಲ್ಲಿ ಸೌಗಂಧಿಪುರವೆಂದು ಖ್ಯಾತಿಯಾಗಿದ್ದ ಪರಿಮಳದ ನಾಡು.

ಬೆಳಗಾವಿ ಜಿಲ್ಲೆಯ ಈಗಿನ ಸವದತ್ತಿಯೇ ಆಗಿನ ಸೌಗಂಧಿಪುರವಾಗಿತ್ತು. ರಟ್ಟ ಮಹಾರಾಜರ ಕಾಲದಲ್ಲಿ ಸೇವಂತಿಗೆ, ಮಲ್ಲಿಗೆ ವಿವಿಧ ಹೂಗಳಿಂದ ತುಂಬಿದ್ದ ಈ ನಾಡು ಸೌಗಂಧಿಪುರವೆಂದೇ ಖ್ಯಾತಿಯಾಗಿತ್ತು. ಹೆಸರಿಗೆ ತಕ್ಕಹಾಗೇ ಹೂಗಳ ಪರಿಮಳ ಇಲ್ಲಿ ಆವರಿಸಿತ್ತು.


ಅದೇನಾಯಿತೋ ಗೋತ್ತಿಲ್ಲ... ಬ್ರಿಟಿಷರ ಆಂಗ್ಲ ಭಾಷೆ, ಆಧುನಿಕ ಜಗತ್ತಿನತ್ತ ಜನರ ಆಕರ್ಷಣೆ ನಮ್ಮೂರಿನ ಸುಂದರಿಯ ಹೆಸರನ್ನೇ ಬದಲಾಯಿಸುವಂತೆ ಮಾಡಿತು ಎಂದು ನಮ್ಮ ಹಿರಿಯರು ಈಗಲೂ ದೂರುತ್ತಾರೆ. ಸೌಗಂಧಿಪುರದಿಂದ ಸೌಂದತ್ತಿಯಾಗಿ ಈಗ ಸವದತ್ತಿಯಾಗಿದೆ. ಆದರೆ, ನನಗೆ 'ಸೌಗಂಧಿ'ಯೇ ಇಷ್ಟ.


ಬೆಳಗಾವಿಯಿಂದ 80 ಕಿ.ಮೀ. ಹಾಗೂ ಧಾರವಾಡದಿಂದ 40 ಕಿ.ಮೀ. ಅಂತರದಲ್ಲಿರುವ ನಾಡು ಈ ಸೌಗಂಧಿ. ಮಲಪ್ರಭೆಯ ತಟದಲ್ಲಿ, ಏಳು ಗುಡ್ಡಗಳ ಯಲ್ಲಮ್ಮನ ಆಶೀರ್ವಾದದಲ್ಲಿ ಬೆಳೆಯುತ್ತಿರುವ ಪುಟ್ಟ ಪಟ್ಟಣ. ತಾಲೂಕು ಪ್ರದೇಶವಾಗಿ ಸುತ್ತ ಹತ್ತಾರು ಹಳ್ಳಿಯ ಗೌಡ. ಮಲಪ್ರಭೆಯ ಕೃಪೆಯಿಂದ ತೋಟಗಳಿಂದ ಸಮೃದ್ಧ.


ಮಲಪ್ರಭೆ ಕೋಪವೇ ಸೌಗಂಧಿಗೆ ವರ: ಒಮ್ಮೆ ಮಲಪ್ರಭೆ ತನ್ನ ಪಾಡಿಗೆ ಹರಿದು ಹೋಗುತ್ತಿದ್ದಳು. ಬಯಲು ದಾಟಿ ಸಾಲು ಗುಡ್ಡಗಳ ಸಂದಿಯಲ್ಲಿ ಧಾರೆಯಾಗಿ ಸಾಗುತ್ತಿದ್ದಳು. ಪಕ್ಕದಲ್ಲೇ ಇದ್ದ ಗುಡ್ಡವೊಂದರ ಮೇಲೆ ಕುಳಿತ ನವಿಲೊಂದು, "ಮಲಪ್ರಭೆ ನನ್ನನ್ನು ನೋಡಿ ಹೆದರಿ ಹೋಗುತ್ತಿದ್ದಾಳೆಂದು" ಕೇಕೆ ಹಾಕಿದೆ. ಇದರಿಂದ ಕೋಪಗೊಂಡ ಮಲಪ್ರಭೆ ಹಿಂದೆ ಬಂದು ನವಿಲು ಕುಳಿತ ಗುಡ್ಡವನ್ನೇ ಛಿದ್ರ ಮಾಡಿ ಮುಂದೆ ಸಾಗಿದಳಂತೆ. ಈಗ ಆ ಪ್ರದೇಶವೇ 'ನವಿಲುತೀರ್ಥ' ಎಂಬ ತಾಣವಾಗಿ ಪ್ರಸಿದ್ಧಿಯಾಗಿದೆ.


ನಮ್ಮ ತಾತ-ಮುತ್ತಾತರಿಂದ ಬಂದ ಈ ಕಥೆ ಇಂದಿಗೂ ಇಲ್ಲಿ ಪ್ರಸ್ತುತ. ಪ್ರತಿ ಬಾರಿಯೂ ನವಿಲುತೀರ್ಥಕ್ಕೆ ಹೋದಾಗ ಈ ಕಥೆ ನಿಜವಿರಬಹುದೇನೋ ಅನಿಸುತ್ತದೆ. ವಿಶೇಷವೆಂದರೆ ಈ ತಾಣದ ಸುತ್ತಮುತ್ತ ಸಾಕಷ್ಟು ನವಿಲುಗಳಿಗೆ. ಸ್ವಚ್ಛಂದವಾಗಿ ತಿರುಗುವ ಅವುಗಳನ್ನು ನೋಡಿದರೇ ಈ ತಾಣಕ್ಕೆ ನವಿಲುತೀರ್ಥ ಎಂಬ ಹೆಸರಿಟ್ಟಿರುವುದು ಸೂಕ್ತ. ಅನಂತರ ರಾಜ್ಯ ಸರ್ಕಾರ ಇಲ್ಲಿ ಒಂದು ಅಣೆಕಟ್ಟು ನಿರ್ಮಿಸಿ ಅದಕ್ಕೆ ನವಿಲುತೀರ್ಥ ಅಣೆಕಟ್ಟು ಎಂದೇ ಹೆಸರಿಟ್ಟಿದೆ.


ಸೌಗಂಧಿಯ ಕೋಟೆ: ರಟ್ಟ ಅರಸರ ಕಾಲದಲ್ಲಿ ಪರಸಗಢ ಎಂಬ ಕೋಟೆ ಸೌಗಂಧಿಯ ಹೃದಯಭಾಗದಲ್ಲಿನ ಎತ್ತರದ ಗುಡ್ಡದ ಮೇಲೆ ನೆಲೆನಿಂತಿದೆ. ಶತಮಾನಗಳ ಬಿಸಿಲು ಮಳೆಯನ್ನು ಕಂಡ ಕೋಟೆ ಈಗಲೂ ಸೌಗಂಧಿಪುರದ ಸಮೃದ್ಧಿಯನ್ನು ಸಾರುತ್ತಿದೆ. ಬ್ರಿಟಿಷರ ತೋಪುಗಳಿಗೆ ಎದೆಯೊಡ್ಡಿ ಅಲುಗದ ಕನ್ನಡಿಗರ ಕೋಟೆ. ಪ್ರಸ್ತುತ ಪ್ರವಾಸಿಗರ ಬೀಡು.


ಇದನ್ನು ಹೊರತುಪಡಿಸಿ ಇನ್ನೊಂದು ಕೋಟೆ ಪಟ್ಟಣದಿಂದ 2 ಕಿ.ಮೀ. ಅಂತರದಲ್ಲಿ ಇನ್ನೊಂದು ಬೆಟ್ಟದ ಮೇಲಿದೆ. ಆದರೆ, ಶತ್ರುಗಳ ಭಾರೀ ದಾಳಿ ಕೋಟೆಯನ್ನು ಅಭದ್ರಗೊಳಿಸಿದೆ.


ಇಷ್ಟಾಯಿತು ನಮ್ಮೂರಿನ ಪುಟಾಣಿ ಕಥೆ. ಪುರಾತನ ಸೌಗಂಧಿಯ ಹೆಸರು ಈಗಲೂ ಅಜರಾಮರವಾಗಿಬೇಕೆಂದು ಪಟ್ಟಣದ ಒಂದು ಪ್ರದೇಶಕ್ಕೆ ಸೌಗಂಧಿಪುರವೆಂದೇ ಹೆಸರಿಡಲಾಗಿದೆ.

ಸಮಯ ಸಿಕ್ಕರೇ ಒಮ್ಮೆ ನಮ್ಮೂರಿಗೆ ಬಂದು ಹೋಗಿ...

ಸೋಮವಾರ, ಜುಲೈ 21, 2008

ಮೊದಲ ಮಾತು...

ನ್ನದು ಅಂತಾ ಒಂದು ಪುಟ್ಟ ತಾಣ. ಅದರಲ್ಲ್ಲಿ ನನ್ನ ಕನಸುಗಳ ಮುತ್ತು ಪೊಣಿಸಿ, ಸಾಲಾಗಿ ನಿಮ್ಮುಂದೆ ಜೋಡಿಸಬೇಕೆಂಬ ಪುಟ್ಟ ಆಸೆ ಬಹು ದಿನಗಳಿಂದ ಇತ್ತಾದರೂ ಕೈಗೂಡಿರಲಿಲ್ಲ. ಇದೀಗ ನನಸಾಗಿದೆ. ಈಗಷ್ಟೇ ತೆರೆದ ಈ ಪುಟಕ್ಕೆ ಏನು ಗೀಚಬೇಕೆಂದು ತಿಳಿಯುತ್ತಿಲ್ಲ. ಆದರೂ ಗೀಚಬೇಕೆಂಬ ಹಠಕ್ಕೆ ಬಿದ್ದಿದ್ದೇನೆ....

'ಮೊದಲ ಚುಂಬನಂ ದಂತ ಭಗ್ನಂ' ಅಂತಾರೆ. ನನಗೂ ಈಗ ಹಾಗೇ ಅನಿಸ್ತಿದೆ. ಆದರೆ, ಇದು ಮುತ್ತಲ್ಲ... ಮನದ ಮಾತು. ಹೇಗೆ ಆರಂಭಿಸಬೇಕೆಂಬ ತಳಮಳ, ಗೊಂದಲ.

ಮೊದಲ ಪ್ರೇಮ ಪತ್ರ ಬರೆಯುವಾಗಿ ಹಠಾತ್ತ್ ಕವಿಯಾಗಿ ಸಾಲು ಸಾಲು ಗೀಚಿದಂತೆ...ಛೇ, ಬರೆದಿದ್ದು ಸರಿಯಿಲ್ಲ...ಇನ್ನಷ್ಟು ಚೆನ್ನಾಗಿ ಬರಿಬಹುದಿತ್ತು ಎಂದು ಮನಸ್ಸು ಎಂದೋಡನೆ ಹಾಳೆ ಹರಿದು ಡಬ್ಬಿ ತುಂಬುತ್ತವೆ. ಗಂಟೆಗಟ್ಟಲೇ ಬರೆದರೂ ಒಂದು ಸಾಲೂ ಪೂರ್ಣಗೊಳ್ಳದಂತ ಸ್ಥಿತಿ....

ಈಗಲೂ ನಾನು ಮೊದಲ ಪ್ರೇಮ ಪತ್ರ ಬರೆಯುತ್ತಿದ್ದೇನೆನೋ ಅನಿಸುತಿದೆ. ಮೊದಲ ಮಳೆಗೆ ಮುಖವೊಡ್ಡುತ್ತಿದ್ದೇನೆ. ಮಿಂದಾದರೂ ಸರಿಯೇ ಮಧುರ ಭಾವನೆಗಳ ಮಾತು ನಿಮ್ಮುಂದೆ ಹರಡುತ್ತಿದ್ದೇನೆ. ಜೀವನಾನುಭವ, ಬಾಲ್ಯದ ಸವಿನೆನಪು, ಕಾಲೇಜು ತರಂಗ, ಸ್ನೇಹಿತರ ಸಿಂಚನ, ಮುಗುಳ್ನಗೆಯ ಹುಡುಗಿ... ಇನ್ನೂ ನನ್ನ ಸಿಹಿಕಹಿ ಅನುಭವ ನಿಮ್ಮ ಮುಂದೆ ಇಡಬಯಸುತ್ತೇನೆ. ಸರಿ-ತಪ್ಪು ನೀವು ನನ್ನ ಜತೆಗಿರುತ್ತೀರಲ್ಲವೇ...

ನಿಮ್ಮವ,
ಮಂಜು....