"ನಿಮ್ಮ ಮನೆಯಲ್ಲಿ ಜಿರಳೆ ಬಂದರೆ ಅದಕ್ಕೆ ಆಹಾರ ಕೊಟ್ಟು ಸಾಕುತ್ತೀರಾ? ಅಥವಾ ಸಾಯಿಸ್ತೀರಾ?"...
ಪೊಲೀಸ್ ಕಮಿಷನರ್ ಉತ್ತರಿಸುವ ಮೊದಲೇ, ಜಿರಳೆಗಳು ಸಾಯಲೇಬೇಕು ಎಂದು ಆತ ಘರ್ಜಿಸುತ್ತಾನೆ. ಏಕೆಂದರೆ ಆತ A Stupid Common Man.
ಮೊನ್ನೆ 'A WEDNESDAY' ಹಿಂದಿ ಚಿತ್ರ ನೋಡಿದೆ. ನೋಡಲೇಬೇಕಾದ ಚಿತ್ರ. ಜನಸಾಮಾನ್ಯನ ಅಂತಃಶಕ್ತಿಯನ್ನು ಬಡಿದೆಬ್ಬಿಸುವ ಚಿತ್ರ. ನಮಗೆ ಯಾವುದೇ ಶಕ್ತಿ, ಅಧಿಕಾರವಿಲ್ಲ ಎಂದು ಕೈಚೆಲ್ಲಿ ಕೂರುವ ಸಾಮಾನ್ಯನಿಗೆ ಆತನ ದಿವ್ಯ ಸಾಮರ್ಥ್ಯವನ್ನು ಸ್ಮರಿಸುತ್ತದೆ.
ಒಂದೇ ಸಾಲಿನಲ್ಲಿ ಹೇಳಬೇಕೆಂದರೆ, ರೈಲುಗಳಲ್ಲಿ ಬಾಂಬ್ ಇಟ್ಟು ನೂರಾರು ಅಮಾಯಕರನ್ನು ಬಲಿತೆಗೆದುಕೊಳ್ಳುವ ದುಷ್ಟ ಶಕ್ತಿಯನ್ನು ಸರ್ವನಾಶ ಮಾಡುವ ಓರ್ವ ಸಾಮಾನ್ಯ ಮನುಷ್ಯನ ಏಕಾಂಗಿ ಹೋರಾಟವೇ 'A WEDNESDAY'. ನಮ್ಮ ಕುಟುಂಬ (ದೇಶ) ಗಲೀಜಾಗಿದೆ. ನಾವೇ, ಪೊರಕೆ ಹಿಡಿದು ಸ್ವಚ್ಛಗೊಳಿಸಬೇಕು ಎಂಬುದೊಂದೇ ಸಾರ.
ಯಾವುದೇ ತಂತ್ರಜ್ಞ, ವಿದ್ವಾಂಸ, ಮುತ್ಸದ್ಧಿ ಕೂಡ ಸಾಮಾನ್ಯ ವ್ಯಕ್ತಿಯೇ. ಜನರಿಂದ ಗುರುತಿಸಲ್ಪಟ್ಟು ಗಣ್ಯರ ಸಾಲಿನಲ್ಲಿ ಕುಳಿತಿರುತ್ತಾನೆ. ಅದೇ ರೀತಿ, ಓರ್ವ ವಿದ್ವಾಂಸ ಇಂದು ಜನಸಾಮಾನ್ಯನಾಗಿರಬಹುದು. ಆತನಲ್ಲೂ ಬುದ್ಧಿ, ಶಕ್ತಿ ಎಲ್ಲವೂ ಇದೆ. ಗಣ್ಯರೆನಿಸಿಕೊಂಡವರಿಗಿಂತಲೂ ಹೆಚ್ಚಿಗಿದೆ. ಎಲ್ಲವೂ ಒಟ್ಟುಗೂಡಿದರೇ ಕ್ರಾಂತಿಗೆ ನಾಂದಿ.
ಈ ಚಿತ್ರದಲ್ಲಿ ಸಾಮಾನ್ಯನೋರ್ವ ತನ್ನ ಬುದ್ಧಿ ಚತುರತೆಯಿಂದ ನೂರಾರು ಜನರನ್ನು ಬಲಿತೆಗೆದುಕೊಂಡ ಉಗ್ರರನ್ನು ಯಮಪುರಿಗೆ ಅಟ್ಟುತ್ತಾನೆ. ಅಮಾಯಕನ ಸಾವಿನ ಆಕ್ರಂಧನ ನೋಡಿ ಕೇಕೆ ಹಾಕುವ ದುಷ್ಟರಿಗೆ ಮರಣದಂಡನೆ ಶಿಕ್ಷೆ ನೀಡುತ್ತಾನೆ. ಯಾವುದೇ ಹಾಡು, ಕುಣಿತ, ತಮಾಷೆಗಳಿಲ್ಲದ ಚಿತ್ರ ಕೇವಲ ಒಂದುವರೆ ಗಂಟೆಯಲ್ಲಿ ಸಮಾಜದ ಎಲ್ಲ ಮುಖಗಳನ್ನು ತೋರಿಸುತ್ತದೆ.
ನಾವು A Stupid Common Man ಆದ್ರೆ: ಕೆಲವೊಮ್ಮೆ ಆಗಲೇಬೇಕು ಅನಿಸುತ್ತೆ. ಇಂದಿನ ಭ್ರಷ್ಟ ರಾಜಕೀಯ, ದುಷ್ಟ ಆಡಳಿತ, ಲಂಚಗುಳಿತನ, ಮೋಸದ ರಂಗೋಲಿ ಕೆಳಗೇ ತೂರುವ ಖದೀಮರು, ಅನಿಷ್ಟ ಪದ್ಥತಿ. ಛೇ, ಇನ್ನೂ ಎಷ್ಟು ದಿನ ಸಹಿಸ್ಕೋಬೇಕು. ಅಡ್ಜಸ್ಟ್ ಮಾಡ್ಕೊಂಡು ಸಾಕಾಗಿದೆ.
ವ್ಯವಸ್ಥೆ ಹದಗೆಟ್ಟು ಗಬ್ಬುನಾರುತ್ತಿದೆ ಎನ್ನುವುದಕ್ಕೆ ದೊಡ್ಡ ಉದಾಹರಣೆ ಬೇಕಿಲ್ಲ. ಚಿಲ್ಲರೆ ಹಣಕ್ಕಾಗಿ ವಂಚಿಸುವ ಕೆಲ ಬಸ್ ಕಂಡಕ್ಟರ್, ಪೊಲೀಸ್, ಸರಕಾರಿ ಕಚೇರಿಗಳಲ್ಲಿನ ಲಂಚುಗಳಿತನ, ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇನ್ನೂ ಕೋಟಿಗಟ್ಟಲೇ ನುಂಗುವ ತಿಮಿಂಗಲುಗಳ ಲೆಕ್ಕ ಹಾಕಲು ಸಾಧ್ಯವೆ.
ಆದರೆ ಸಾಮಾನ್ಯನ ಸಹನೆಗೂ ಮಿತಿಯಿದೆ. ಸಹನೆ ಮೀರಿದರೇ ಆತನನ್ನು ತಡೆಯುವವರಿಲ್ಲ. ಕ್ರಾಂತಿಯಾದೀತು ಎಚ್ಚರಿಕೆ. ಏಕೆಂದರೆ, ಮನೆಗೆ ಜಿರಳೆ ಬಂದರೆ ಸಾಯಿಸಬೇಕೇ ಹೊರತು ಸಾಕುವುದಿಲ್ಲ.
5 ಕಾಮೆಂಟ್‌ಗಳು:
ಒಳ್ಳೇ ರಿವ್ಯೂ.. ನಂಗೂ ಈ ಸಿನಿಮಾ ಬಹಳ ಇಷ್ಟ ಆಯ್ತು :-)
ನಾವೆಲ್ಲ ಸಾಮಾನ್ಯರೇ ಮಂಜು,
ಅಸ್ತಿತ್ವ ಅಲುಗಾಡುವತನಕ ಏಳುವುದಿಲ್ಲ, ಎದ್ದರೂ ತುಂಬ ಹೊತ್ತು ನಿಲ್ಲಲಾರೆವು. ಮತ್ತೆ ಕುಸಿದು ಬೀಳುತ್ತೇವೆ.
ಇದನ್ನೇ ತಾನೆ ಪ್ರತಿಯೊಬ್ಬರೂ ಬಳಸಿಕೊಳ್ಳುತ್ತ ಹೊರಟಿರುವುದು. ಮಾಧ್ಯಮ, ಸಿನಿಮಾ, ಉದ್ಯಮ, ರಾಜಕಾರಣ, ಸಮಾಜ, ಸಂಬಂಧ- ಎಲ್ಲವೂ ಈ ದೋಷ ಅಥವಾ ಔದಾರ್ಯ(?)ವನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವುದು.
wednesday ಅಷ್ಟೇ ಅಲ್ಲ, ಯಾವ ದಿನ ಬಂದರೂ ಈ ಪರಿಸ್ಥಿತಿ ಅಷ್ಟು ಸುಲಭವಾಗಿ ಬದಲಾಗುವುದಿಲ್ಲ. ಎಲ್ಲಿಯವರೆಗೆ ನಮ್ಮ ಗುರಿಯೇನು, ಆದ್ಯತೆಯೇನು ಎಂಬುದು ಸ್ಪಷ್ಟವಾಗುವವರೆಗೆ ಈ ಬದುಕು ಹೀಗೇ ಇರುತ್ತದೆ. ಹೀಗೇ ಸಾಗುತ್ತದೆ.
ಸಾಧ್ಯವಾದಷ್ಟೂ ಪ್ರಯತ್ನಿಸಿ ಈ ಸಿನಿಮಾ ನೋಡಲು ಪ್ರಯತ್ನಿಸುತ್ತೇನೆ. ಥೇಟರ್‌ನಲ್ಲಿ ಸಿನಿಮಾ ನೋಡಿ ವರ್ಷಗಳೇ ಆದವು.
- ಪಲ್ಲವಿ ಎಸ್.
ಥ್ಯಾಂಕ್ಸ್ ಹರೀಶ.
ನಿಜ ಹೇಳಬೇಕೆಂದರೆ ನನಗೆ ಚಿತ್ರ ವಿಮರ್ಶೆ ಮಾಡೋದು ಅಂದ್ರೆ ಅಷ್ಟಕ್ಕಷ್ಟೆ. ಆದ್ರೆ ಈ ಚಿತ್ರ ನಂಗೆ ತುಂಬಾನೆ ಇಷ್ಟ ಆಯ್ತು. ಏನಾದ್ರು ಒಂದು ಬದಲಾವಣೆಗೆ ಸಹಾಯ ಅಥವಾ ಪೂರಕವಾದಾಗ ಮಾತ್ರ ಆ ಚಿತ್ರಕ್ಕೆ ಬೆಲೆ.
Taare Zameen Par, Gangajal, Sholay ಈಗ Wednseday. ಇಂತಹ ಚಿತ್ರಗಳು ಜಾಸ್ತಿ ಬಂದರೆ ನಮ್ಮ ಸಮಾಜ ಸ್ವಲ್ಪನಾದ್ರು ಸುಧಾರಿಸಬಹುದು ಅಲ್ವಾ.
ನೀವು ಹೇಳೋದು ನಿಜ ಪಲ್ಲವಿ.
ನಾವು ಸಾಮಾನ್ಯರು. ಆದರೂ ನಮ್ಮಲ್ಲಿ ಅಸಾಮಾನ್ಯ ಶಕ್ತಿ ಇದೆ. ಆದರೆ ಈ ಕ್ರೂರ ವ್ಯವಸ್ಥೆ ಸಾಮಾನ್ಯನ ಶಕ್ತಿಯನ್ನು ಮುರಿಯುತ್ತಿದೆ. ಇದನ್ನು ಕಂಡು ಕಂಡು ಸುಮ್ಮನೆ ಕೂರುವುದು ಸರಿಯೇ.
ನಾವು ಹೀಗೆ ಸುಮ್ಮನಾಗಿರುವುದಕ್ಕೆ ಬಲಿಪಶುಗಳಾಗುತ್ತಿದ್ದೇವೆ. ಒಬ್ಬರಿಗೆ ಅನ್ಯಾಯವಾದಾಗ ನಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತೇವೆ. ನಮಗ್ಯಾಕೇ ಈ ರಗಳೆ ಎನ್ನುವವರೇ ಸಾಕಷ್ಟು. ಇವತ್ತು ಅವನಿಗೆ. ನಾಳೆ ಇನ್ನೊಬ್ಬನಿಗೆ. ನಾಡಿದ್ದು ನಮಗೂ ಆಗಬಹುದು.
ಇನ್ನೂ ಇದರಿಂದ ರೊಚ್ಚಿಗೆದ್ದವರು ಕೋವಿ ಹಿಡಿದು ಕಾಡು ಸೇರುತ್ತಾರೆ, ಸಾಯುತ್ತಾರೆ. ಆದರೆ, ಸಿಕ್ಕಾಪಟ್ಟೆ ಕಲುಷಿತ ವ್ಯವಸ್ಥೆ ಇರುವುದು ನಗರದಲ್ಲಿ. ಕಾಡು ಸೇರುವವರ ಹೋರಾಟ ನಾಡಿನಲ್ಲಾಗಿದ್ದರೆ ಏನೋ ಸುಧಾರಣೆಯಾಗ್ತಿತ್ತು.
ಆದರೆ ಒಂದು ಮಾತು ನಿಜ ಪಲ್ಲವಿ. ಜನರಿಗೆ ಗುರಿ, ಆದ್ಯತೆ ಇದೆ. ಸ್ಪಷ್ಟವಾಗುವುದೂ ತಡವಲ್ಲ. ಟೈಮ್ ಬೇಕು. ಅರ್ಥವಾದಾಗ ನಿಜವಾದ wednesday ಬರುತ್ತೆ.
ನನ್ನ ಪ್ರತಿಕ್ರಿಯೆ ಕಟುವಾಗಿದೆ ಎನಿಸಬಹುದು. ಹುಟ್ಟಿನಿಂದ ನಮ್ಮೂರಿನ ಶಾಂತ ಪ್ರದೇಶದಲ್ಲಿ ಬೆಳೆದ ನನಗೆ ಬೆಂಗಳೂರಿನ ವ್ಯವಸ್ಥೆ ಅಸಹ್ಯವೆನಿಸುತ್ತೆ. ತಪ್ಪು ನಡೆಯುತ್ತಿರುವುದನ್ನು ಕಂಡಾಗ ರಕ್ತ ಕುದಿಯುತ್ತೆ. ಯಾವುದು ಬೇಡ ನಮ್ಮೂರಿಗೆ ಹೋಗೋಣ ಅನಿಸುತ್ತೆ.
ಸಿನೇಮಾ ತುಂಬಾ ಚೆನ್ನಾಗಿದೆ.. ನಮ್ಮಂಥ ಸಾಮಾನ್ಯ ಜನರ ಧ್ವನಿಯಂತಿದೆ.. ಹಾಗೆ ನಿಮ್ಮ ಲೇಖನ ಕೂಡ. ಧನ್ಯವಾದಗಳು..
ಕಾಮೆಂಟ್ ಪೋಸ್ಟ್ ಮಾಡಿ