ಶನಿವಾರ, ಅಕ್ಟೋಬರ್ 23, 2010

ನನಸೇ ನೀ ಕನಸು ಏಕಾದೇ ?

ಲ್ಲಿ ಅವಳು ಮತ್ತು ನಾನು...
ದಿಢೀರ್ ಬಂದ ಜೋರು ಮಳೆ. ಮಳೆ ನೀರಿಗೆ ನೆನೆಯದಂತೆ ನಿಲ್ಲಲು ಯಾವುದೇ ನೆರಳು ಕೂಡ ಇಲ್ಲ. ಇದ್ದಿದ್ದು ಒಂದೇ ಒಂದು ಛತ್ರಿ. ಅದಕ್ಕೊಂದು ಸಣ್ಣ ರಂಧ್ರ. ನೆತ್ತಿಯ ಮೇಲೆ ತಟ ತಟ ಸೋರುತ್ತ ಬೀಳುವ ಮಳೆ ಹನಿ. ಆ ಛತ್ರಿಯ ಕೆಳಗೆ ನಾನು ಮತ್ತು ಅವಳು ಮಳೆ ನೀರಿಗೆ ಸಿಲುಕದಂತೆ ಮುದುಡಿ ನಿಲ್ಲಬೇಕು.
ಇದೇನು ಹಗಲು ಕನಸು ಕಾಣುತ್ತಿದ್ದಾನೆ ಅನ್ನುತ್ತಿದ್ದಿರಾ? ಹೌದು, ಈಗ ಇದು ಕನಸೇ. ಬಹುಷ ಈ ಕನಸು ನನಸಾಗಬಾರದೆ ಎಂದು ಕನಿಷ್ಠ ಸಾವಿರ ಬಾರಿ ಅಂದುಕೊಂಡಿದ್ದೇನೆ. ಆದರೂ ಒಂದು ಮಾತು ಹೇಳಾ. ಇದು ಬರೀ ಕನಸಲ್ಲ. ನನಸೇ ಇಲ್ಲಿ ನನ್ನ ಕನಸು.
********
ಎಲ್ಲರೂ ಕನಸು ಕಾಣುತ್ತಾರೆ. ಅದು ನನಸು ಆಗಲೆಂದು ಬಯಸುತ್ತಾರೆ, ದೇವರಲ್ಲಿ ಪ್ರಾರ್ಥಿಸುತ್ತಾರೆ. ಆದರೆ, ಕೆಲವೊಮ್ಮೆ ನಿಜವಾಗಿ ನಡೆದ ಮಧುರ ಘಟನೆಯೊಂದು ಮತ್ತೊಮ್ಮೆ ನಡೆಯುವುದಿಲ್ಲ. ದಿನ ಕಳೆದಂತೆ ಅದು ನೆನಪು ಮಾತ್ರವಾಗಿ, ಕನಸಿನ ರೂಪ ಪಡೆಯುತ್ತದೆ. ಮತ್ತೆ ಮತ್ತೆ ಆ ಕನಸು ಬೀಳುತ್ತದೆ. ಓ ದೇವರೇ, ಮತ್ತೊಮ್ಮೆ ಆ ಕನಸು ನನಸಾಗಬಾರದೆ ಎಂದು ಮನಸು ಬಹಳ ತುಡಿಯುತ್ತೆ, ನಲಗುತ್ತೆ, ಕೊನೆಗೆ ಅಳುತ್ತೆ.
ಪದೇಪದೇ ಕನಸು ಕಂಡು ಕಂಗಾಲಾಗುವ ಬದಲು ದಿಕ್ಕೆಟ್ಟು ಓಡಿ ಹೋಗಬೇಕು... ಅಲ್ಲಿ ಆ ಮಳೆ ಹುಡುಗಿ ಹುಡುಕಿ, ರಂಧ್ರದ ಛತ್ರಿ ಹಿಡಿದು ಮಳೆಯಲ್ಲಿ ನೆನೆಯೋಣ ಅನಿಸುತ್ತೆ.
********
ಅದು ಮಳೆಗಾಲ. ಪ್ರಕೃತಿಯ ಸುಂದರ ತಾಣ, ಮಲೆನಾಡಿನ ವನಸಿರಿ ನೋಡುವ ಅಸೆ. ನನಗಿಷ್ಟವಾದ ಅವಳೊಂದಿಗೆ ಹೋಗುವಾಸೆ. ನಾನೆಂದರೆ ಅವಳಿಗೆ ಬೆಟ್ಟದಷ್ಟು ಇಷ್ಟ. ಸರಿ ಯಾವುದಾದರೂ ಬೆಟ್ಟಕ್ಕೆ ಹೋಗೋಣ ಬಾರೆ ಅಂದಾಗ ಹೂಂ ಎಂದು ಮುದ್ದು ನಗೆ ಬೀರಿದಳು.
ಹೀಗೆ ಶುರುವಾಯ್ತು ನಮ್ಮ ಪರ್ವತಾರೋಹಣ. ಇಬ್ಬರೂ ಬೆಟ್ಟ ಏರಿ, ಗುಡ್ಡ ಸುತ್ತಿ, ಹಾಡಿ ಕುಣಿದಾಡಿದರೂ ಸುಸ್ತು ಕಾಣಲಿಲ್ಲ. ಸ್ವಚ್ಛಂದ ಹಕ್ಕಿಗಳಾಗಿ ಹಾರುವ ನಮ್ಮನು ನೋಡಿ ಮುಗಿಲು, ಭೂಮಿ ಒಂದಾದವು ಎನ್ನುವಷ್ಟು ಆಹ್ಲಾದಕರ ಪರಿಸರ.
ಮೇಘ ಮೇಳೈಸಿ ಬಂದಾಗ ನಾವು ಬೆಟ್ಟದ ಮೇಲೆ ಬಂದಿದ್ದೆವು. ಬಿಸಿಲ ಜೊತೆ ಮೇಘಗಳು ಹನಿಯೊಡೆದಾಗ ಬಾನಗಲ ಕಾಮನಬಿಲ್ಲು ಮೂಡಿ ರಮ್ಯ ಚೈತ್ರ ಕಾಲ. ಇನ್ನೇನು ಮಳೆ ಹನಿ ಬಿರುಸಾದಾಗ ದಿಕ್ಕಾಪಾಲಾದ ನಾವು ಮರವೊಂದರ ಕೆಳಗೆ ನಿಲ್ಲುವದು ಅನಿವಾರ್ಯವಾಯಿತು. ಮಳೆಯಲ್ಲಿ ನೆನೆಯುವ ಹಾಗೆ ಮಾಡಿದೆ ಎಂದು ನನ್ನವಳು ಬೈಯುವಳೋ ಎಂದು ಅವಳ ಮುಖ ನೋಡಿದರೆ, ಪಾಪ ನನ್ನ ಹುಡುಗ ನೆನೆಯುತ್ತಿದ್ದಾನೆ ಎಂದು ಅವಳು ಮರಗುತ್ತಿದ್ದಳು. ಆ ಕಣ್ಣಲ್ಲಿ ನೋವಿತ್ತು, ಮುಖದಲ್ಲಿ ಮಮತೆ ಇತ್ತು.
ತನ್ನ ಪುಟಾಣಿ ಬ್ಯಾಗನಿಂದ ಪುಟ್ಟ ಛತ್ರಿ ತೆಗೆದು ಆಸರೆಯದಳು. ಕಣ್ಣಲ್ಲಿ ಥ್ಯಾಂಕ್ಸ್ ಹೇಳಿದೆ. ಬೆಳದಿಂಗಳು ಮಲ್ಲಿಗೆ ಚೆಲ್ಲುವಷ್ಟು ಮುದ್ದಾಗಿ ನಕ್ಕಳು. ಅವಳಿಗೆ ನಾನು ಆಸರೆಯಾಗಿ, ನನಗೆ ಅವಳು ಆಸರೆಯಾಗಿ ನಿಂತಿದ್ದೆ ಬಂತು. ಉಹುಂ ಮಳೆ ನಿಲ್ಲುವ ಕರುಣೆ ತೋರಲಿಲ್ಲ.
ಈ ನಡುವೆ, ನನ್ನವಳ ಛತ್ರಿಯ ಚಾವಣಿಯಲ್ಲಿ ರಂಧ್ರ ಬಿದ್ದಿದ್ದರಿಂದ ಅದು ಹನಿಯಾಗಿ ತಟ ತಟ ಬೀಳುತ್ತಿದ್ದಂತೆ 'ಇದೊಳ್ಳೆ ಸಮಸ್ಯೆ ಆಯ್ತಲ್ಲ' ಎಂದು ಪೇಚಾಡಬೇಕಾಯಿತು. ಅದು ಅಷ್ಟಕ್ಕೇ ಸುಮ್ಮನಾಗದೆ ನೀರು ಝರಿಯಂತೆ ಹರಿಯತೊಡಗಿದಾಗ ನಾವಿಬ್ಬರು ಕಂಗಾಲು. ಇನ್ನು ಲ್ಲೇ ನಿಂತರೆ ಬಲು ಕಷ್ಟ ಎಂದು ಹಾಗೆ ಜೊತೆಯಾಗಿ ಮುಂದೆ ಹೆಜ್ಜೆ ಹಾಕಬೇಕಾಯಿತು. ಬೆಟ್ಟ ದಾಟಿ ರಸ್ತೆ ತಲುಪಿದಾಗ ಬಹುತೇಕ ಮಜ್ಜನರಾಗಿದ್ದೆವು.
ಸಾಕಪ್ಪ ಸಾಕು, ಯಾವುದಾದರು ವಾಹನ ಸಿಕ್ಕರೆ ಊರು ತಲುಪಿದರೆ ಸಾಕೆಂಬ ಭಾವನೆ ಆಗಲೇ ಮೂಡಿತ್ತು. ಇಷ್ಟಾದರೂ ಮುಂಗಾರು ಮಳೆ ಹುಡುಗಿಯಂತೆ ನನ್ನವಳು ಹಕ್ಕಿಯಂತೆ ಹಾಡುತ್ತ, ರಸ್ತೆ ಮೇಲೆಯೇ ಹೆಜ್ಜೆ ಹಾಕುತ್ತಿದ್ದರೇ ನನಗೆ ಚಳಿ ಅಮರಿ ಮೈಯೆಲ್ಲಾ ನಡುಕ.
"ಸಾಕು ಬಾರೆ, ಮನೆಯಲ್ಲಿ ಅಮ್ಮ ಪೂಜೆ ಮಾಡ್ತಾಳೆ ನಡಿ" ಎಂದಾಗ, ಹಲ್ಲುಗಿಂಜಿದ ನನ್ನವಳ ಮುಖ ನೋಡಿ ಒಳಗೊಳಗೇ ನಕ್ಕಿದ್ದು ಉಂಟು. ಕೊಂಚ ಮುಂದೆ ಸಾಗಿದೊಡನೆ ಕಾಣಿಸಿದೆ ಆಟೋಗೆ ಕೈ ಅಡ್ಡ ಹಾಕಿ ಊರು ತಲುಪಿ ಮನಸು ನಿರಾಳವಾದಾಗ ಮಳೆಯೂ ಶಾಂತವಾಗಿತ್ತು. 3 ಕಾಸಿನ ಮಳೆ ಅಂತಾ ನಾನು ಬೈದರೆ, ನಮ್ಮ ಪಿಕ್ನಿಕ್ ಹಾಳಾಯಿತು ಎಂದು ನನ್ನವಳಿಗೆ ಬೇಸರ.
ಬೆಳಗ್ಗೆ ಸರ್...ಸರ್...ಸರ್... ಎಂಬ ಸದ್ದಿನೊಂದಿಗೆ ಮುಗಿನ ಗೊನ್ನೆ ಸುರಿಸುತ್ತ ಬಂದ ನನ್ನ ಮಳೆ ಹುಡುಗಿಯ ನೋಡಿದಾಗಲೇ ನನಗೆ ಅರಿವಾಗಿದ್ದು ಅವಳಿಗೆ ಶೀತವಾಗಿತ್ತು. ಮುಖ ಕೆಂಪಗಾಗಿಸಿ, "ಕೋತಿ, ನಿನ್ನೆ ಅಮ್ಮ ಎಷ್ಟು ಬೈದರು ಗೊತ್ತಾ. ಮನೆಯಲ್ಲಿ ಯಕ್ಷಗಾನ ನಡೆಯಿತು. ಜತೆಗೆ ಈ ಹಾಳಾದ್ದ ಶೀತ ಬೇರೆ" ಎಂದು ಮಸಾಲೆ ಹಾಕಿ ಕುಕ್ಕಿದ್ದಳು.
---------
ಇದಾದ ಮೇಲೆ ಎಷ್ಟೋ ಬಾರಿ ಮತ್ತೆ ಆ ಬೆಟ್ಟಕ್ಕೆ ಹೋಗಬೇಕು. ಅದೇ ಹಳೆ ತೂತು ಬಿದ್ದ ಛತ್ರಿಯಲ್ಲಿ ಮಳೆಯಲ್ಲಿ ನೆನೆಯಬೇಕು ಎಂದು ಯೋಚಿಸಿದರೂ ಅದು ಸಾಧ್ಯವಾಗಲಿಲ್ಲ. ಬಹುಶ ಅದು ನನ್ನ ಸುಂದರ ದಿನ. ಕಾಣದ ಕನಸು ಅಂದು ನನಸಾಗಿತ್ತು. ಮತ್ತೆ ಮತ್ತೆ ಆ ಕನಸನ್ನು ಇಂದಿಗೂ ಕಾಣುತ್ತೇನೆ. ಮುಂದೆಯೂ ಕಾಣುತ್ತೇನೆ.