ಸೋಮವಾರ, ಡಿಸೆಂಬರ್ 3, 2012

ಮೌನ ಮಾತು


‘ನಂಗೆ ತಲೆನೋಯ್ತಿದೆ ಅಂತಾ ನಿಂಗೆ ಹೇಗೆ ಗೊತ್ತಾಯ್ತು. ಔಷಧ ಕೊಟ್ಟಿದ್ದಕ್ಕೆ ಥ್ಯಾಂಕ್ಸ್...’

ಹೀಗೊಂದು ಪುಟ್ಟ ಮೇಸೆಜ್ ಇನ್ ಬಾಕ್ಸ್‌ನಲ್ಲಿ ಇಣುಕಿದಾಗ ನಿಜಕ್ಕೂ ಖುಷಿಯಾಯ್ತು. ನಕ್ಕು ಸುಮ್ಮನಾದೆ.

ಅಂದು ಅವಳಿಗೆ ವಿಪರೀತ ಕೆಲಸ. ನಾಲ್ಕಾರು ಬಾರಿ ಕಣ್ಣುಜ್ಜಿ, ಕೀಬೋರ್ಡ್ ಮೇಲಿದ್ದ ಬೆರಳುಗಳನ್ನು ಮುರಿದಾಡಿದ್ದು ಆಯ್ತು. ಆದರೂ ಏನೋ ಬೇಸರ. ಮಾನಿಟರ್ ಮುಖ ನೋಡಿ ನೋಡಿ ಬಹುಷಃ ತಲೆನೋವು ಬಂದಿರಬಹುದು. ಪದೆಪದೇ ಹಣೆ ಹಿಚುಕಿಕೊಳ್ಳುತ್ತ, ಚಡಪಡಿಸುತ್ತಿದ್ದ ಅವಳ ಮುಖದಲ್ಲಿ ನೋವು ಎದ್ದುಕಾಣುತ್ತಿತ್ತು.

ಒಂದು ಮಾತ್ರೆನೋ, ಒಂಚೂರು ಔಷಧಿನೋ ಸಿಕ್ಕರೆ ಸಾಕಪ್ಪ ಎನ್ನುತ್ತಾ ತನ್ನ ವ್ಯಾನಿಟಿಬ್ಯಾಗ್, ಮೇಜಿನ ಸಂದುಗೊಂದು ಹುಡುಕಿದಳು. ಊಹುಂ ಯಾವುದೇ ಪ್ರಯೋಜನವಿಲ್ಲ. ಸುಮ್ಮನೆ ಒಂದೈದು ನಿಮಿಷ ಕಣ್ಮುಚ್ಚಿ ಕೀಬೋರ್ಡ್‌ಗೆ ಹಣೆಹಚ್ಚಿದಳು.

ಪತ್ರಿಕೆ ಓದುತ್ತಿದ್ದ ನಾನು ಸುಮ್ಮನೆ ಎದ್ದು ಹೋದೆ. ಒಂದೈದು ನಿಮಿಷ ಬಿಟ್ಟು ಬಂದಾಗ ಅದೇ ಬಾಡಿದ ಮುಖ. ಅವಳ ಕಂಪ್ಯೂಟರ್ ಪಕ್ಕದಲ್ಲಿಯೇ ಪುಟ್ಟದಾದ ಒಂದು ಝಂಡು ಬಾಮ್ ಇಟ್ಟು, ನನ್ನ ಕಂಪ್ಯೂಟರ್ ಮುಂದೆ ಕುಳಿತೆ.

ಒಂದೈದು ನಿಮಿಷ ಮೌನ. ಕೊನೆಗೊಂದು ನಗು. ಬಾಮ್ ತೆಗೆದುಕೊಂಡು ಹಣೆ ಸವರಿಕೊಂಡಳು. ಕೆಲಹೊತ್ತಿನಲ್ಲಿ ಒಂದು ಪುಟ್ಟ ಮೇಸೆಜ್ ನನ್ನ ಇನ್ ಬಾಕ್ಸ್ ಸೇರಿತು.

‘ನಂಗೆ ತಲೆನೋಯ್ತಿದೆ ಅಂತಾ ನಿಂಗೆ ಹೇಗೆ ಗೊತ್ತಾಯ್ತು. ಔಷಧ ಕೊಟ್ಟಿದ್ದಕ್ಕೆ ಥ್ಯಾಂಕ್ಸ್...’ ಎಂದು ಬರೆದಿದ್ದಳು.